ಚೆಟ್ಟಳ್ಳಿ, ಅ. 14: ಕಾಫಿಯ ನಾಡೆಂದೇ ಪ್ರಖ್ಯಾತಿ ಪಡೆದ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಅರೆಬಿಕಾ ಫಸಲು ತನ್ನ ಸಮಯದ ಮೊದಲೇ ಬೆಳೆದು ಹಣ್ಣಾಗತೊಡಗಿ ರೈತರಲ್ಲಿ ಆತಂಕಕ್ಕೆ ಕಾರಣವಾಗತೊಡಗಿದೆ..ಕಾಫಿಯಲ್ಲಿ ಹಲವು ವಿಧಗಳಿದ್ದುದಕ್ಷಿಣ ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿಯೇ ಕಾಣಬರುವ ಹಳೆಯ ಹಾಗೂ ಹೊಸ ತಳಿಯ ಅರೆಬಿಕಾಗಳು ಬಲುಬೇಗನೆ ಹಣ್ಣಾಗುತ್ತಿದೆ. ಕೃತಕ ನೀರಾಹಿಸಿದ ಅರೆಬಿಕಾ ತೋಟಗಳಲ್ಲಂತೂ ಫ್ಲೈ ಪಿಕ್ಕಿಂಗ್ (ಹಣ್ಣನ್ನು ಮಾತ್ರ ಹೆಕ್ಕುವದು) ಈಗಾಗಲೇ ಮಾಡಲಾಗಿ ಕೆಲವೆಡೆ ಅಲ್ಪಸ್ವಲ್ಪ ಕಾಫಿಯನ್ನು ಒಣಗಿಸಿ ಇಡಲಾಗಿದೆ.
ಹಣ್ಣನ್ನು ಕುಯ್ಯದಿದ್ದರೆ ಅರೆಬಿಕಾದಲ್ಲಿ ಸಿಹಿಯಾದ ಜ್ಯೂಸ್ನ ಅಂಶ ಹೆಚ್ಚಾಗಿರುವದರಿಂದ ವಿವಿಧ ಬಗೆಯ ಹಕ್ಕಿಗಳು, ಅಳಿಲು, ಮಂಗಗಳೆಲ್ಲ ತಿಂದು ಹಾಕುವದು ಜೊತೆಗೆ ಮಳೆ ಬಂದರೆ ಹಣ್ಣುಗಳೆಲ್ಲ ಒಡೆದು ಉದುರಿ ಹೋಗುವ ಸಾಧ್ಯತೆ ಹೆಚ್ಚಿದೆ.