ಗೋಣಿಕೊಪ್ಪಲು, ಸೆ. 17: ಜೀವನದಲ್ಲಿ ಪ್ರತೀಯೊಬ್ಬರಿಗೂ ಹಲವು ಅವಕಾಶಗಳು ದೊರಯು ತ್ತದೆ. ಅದನ್ನು ಸತ್ ಸಮಾಜಮುಖಿ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಮುಖ್ಯಸ್ಥರಾಗಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸ್ವಾಮಿ ಶ್ರೀ ಮುಕ್ತಿದಾನಂದಜೀ ಮಹರಾಜ್ ಅವರು ಮುಂಬೈ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ನಿಯುಕ್ತರಾಗಿರುವ ಸಂದರ್ಭ ಅವರನ್ನು ಪೊನ್ನಂಪೇಟೆ ಯ ಶ್ರೀ ರಾಮಕೃಷ್ಣ ಶಾರದಾ ಸೇವಾಶ್ರಮದ ಮತ್ತು ಅವರ ಅಭಿಮಾನಿ ಬಳಗದಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕರೆ ನೀಡಿದರು. ಇವರು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮಹಾ ಮಂಡಳಿಯ ಟ್ರಸ್ಟಿಗಳು ಕೂಡ ಆಗಿರುತ್ತಾರೆ. ಮುಂದುವರೆದ ಅವರು ದೇಶದ ವಿದ್ಯಾಸಂಸ್ಥೆಗಳ ಪಟ್ಟಿಯಲ್ಲಿ ಉನ್ನತ ಕ್ರಮಾಂಕದಲ್ಲಿ ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಇದೆ ಮತ್ತು ನಾನು ಆ ಶಾಲೆಯ ಮುಖ್ಯಸ್ಥನಾಗಿ ಕೆಲಸ ಮಾಡಿದ್ದೇನೆ ಎನ್ನುವ ತೃಪ್ತಿ ತಮಗಿದೆ ಎಂದರು.
ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಪಿ ಉತ್ತಪ್ಪ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ವಿದ್ಯಾ ಶಾಲೆಯ ಒಡನಾಟವನ್ನು ನೆನಪಿಸಿಕೊಂಡರು. ಸಲಹಾ ಸಮಿತಿ ಮುಖ್ಯಸ್ಥರಾದ ಸಿ.ಕೆ ಉತ್ತಪ್ಪ ಮಾತನಾಡಿ, ಪೊನ್ನಂಪೇಟೆಯಲ್ಲಿ ವಿಶ್ವ ಭಾವೈಕ್ಯ ಮಂದಿರ ನಿರ್ಮಾಣ ಸಂಧರ್ಭದಲ್ಲಿ ಸ್ವಾಮಿ ಶ್ರೀ ಮುಕ್ತಿದಾನಂದಜೀ ಮಹರಾಜ್ ಅವರು ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡರು. ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಡೀನ್ ಪ್ರಕಾಶ್ ಮಾತನಾಡಿ, ಶಿಲ್ಪಿಯ ಪೆಟ್ಟು ತಿಂದಷ್ಟು ಕಲ್ಲು ಉತ್ತಮ ವಿಗ್ರಹವಾಗುತ್ತದೆ. ತಾವು ವಿದ್ಯಾ ಶಾಲೆಯಲ್ಲಿ ಕಳೆದ ದಿನಗಳಲ್ಲಿ ಅಲ್ಲಿ ಪಡೆದ ಪ್ರೀತಿ, ವಿದ್ಯೆ ಮತ್ತು ತಪ್ಪು ಮಾಡಿದಾಗ ಸಿಕ್ಕಿದ ಶಿಕ್ಷೆ ಇವುಗಳೆಲ್ಲವೂ ನನ್ನನ್ನು ಈ ಮಟ್ಟಕ್ಕೆ ತಲಪಿಸಿದೆ ಎಂದರು. ಇವರ ಸಮಯಪ್ರಜ್ಞೆ ಬಗ್ಗೆ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ 2004ರಲ್ಲಿ ನಡೆದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ಗೋಲ್ಡನ್ ಜುಬಿಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಉದ್ಘಾಟಕರಾಗಿ ಕಾರ್ಯಕ್ರಮಕ್ಕೆ ಒಂದು ಗಂಟೆ ತಡವಾಗಿ ಬರುತ್ತಾರೆ. ಇವರು ಮುಖ್ಯಮಂತ್ರಿಗಳನ್ನು ಕಾಯುವದೇ ಇಲ್ಲ. ಕಾರ್ಯಕ್ರಮ ಪ್ರಾರಂಭವಾಗಿ ಬಿಡುತ್ತದೆ. ಒಂದು ಗಂಟೆಯ ನಂತರ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬಂದು ಸೇರಿಕೊಳ್ಳುತ್ತಾರೆ. ಶಿಕ್ಷಣ ತಜ್ಞರಾಗಿ, ಉತ್ತಮ ಆಡಳಿತ ಗಾರರಾಗಿ, ಸ್ನೇಹಪರ ವ್ಯಕ್ತಿಯಾಗಿ, ಆಧ್ಯಾತ್ಮಿಕ ಚಿಂತಕರಾಗಿ ಅದಕ್ಕೂ ಹೆಚ್ಚಾಗಿ ಸಮಾಜದ, ಸಾರ್ವಜನಿಕರ ವ್ಯಕ್ತಿತ್ವ ವಿಕಸನ ವಿಚಾರದ ಉಪನ್ಯಾಸಕರಾಗಿ ಅವರು ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡರು.
ಪೊನ್ನಂಪೇಟೆ ಆಶ್ರಮದ ಸ್ವಾಮಿ ಪರಹಿತಾನಂದಜೀ ಮಹರಾಜ್ ಅವರು ತಮ್ಮ ಮತ್ತು ಸ್ವಾಮಿ ಶ್ರೀ ಮುಕ್ತಿದಾನಂದಜೀ ಮಹರಾಜ್ ಅವರ ಸುಮಾರು 30 ವರ್ಷಗಳ ಸಂಬಂಧವನ್ನು ನೆನಪಿಸಿಕೊಂಡು ಇವರು ವಿದ್ಯಾರ್ಥಿಗಳ ಜೀವನ ಶಿಲ್ಪಿಗಳು ಮಾತ್ರವಾಗಿರದೆ ಸಂಸ್ಥೆಯ ಬಹುಮುಖ ಅಭಿವೃದ್ಧಿಯ ಶಿಲ್ಪಿಗಳೂ ಕೂಡ ಆಗಿದ್ದಾರೆ. ಇದಕ್ಕೆ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ಗೋಲ್ಡನ್ ಜುಬಿಲಿ ಕಟ್ಟಡ ಒಂದು ಉದಾಹರಣೆ ಎಂದರು
ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದ ವಿದ್ಯಾಶಾಲೆ ಮತ್ತು ಸ್ವಾಮಿ ಶ್ರೀ ಮುಕ್ತಿದಾನಂದಜೀ ಮಹರಾಜ್ರವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ. ಅಮೃತ್ ನಾಣಯ್ಯ, ಪೋರಂಗಡ ಚಿಟ್ಟಿಯಪ್ಪ, ಪೋಷಕರಾದ ರೇವತಿ ತಮ್ಮ ಅನುಭವವನ್ನು ಹಂಚಿಕೊಂಡರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಆಶ್ರಮದ ಹಿರಿಯ ಯತಿಗಳಾದ ಶ್ರೀ ಜಗದಾತ್ಮಾನಂದಜೀ ಮಹರಾಜ್ ಅವರು ಸ್ವಾಮಿ ಮುಕ್ತಿದಾನಂದರು ಶಿಕ್ಷಣ ತಜ್ಞರಾಗಿ, ಉತ್ತಮ ಆಡಳಿತಗಾರರಾಗಿ, ಸ್ನೇಹಪರ ವ್ಯಕ್ತಿಯಾಗಿ, ಆಧ್ಯಾತ್ಮಿಕ ಚಿಂತಕರಾಗಿ ಅದಕ್ಕೂ ಹೆಚ್ಚಾಗಿ ಸಮಾಜದ, ಸಾರ್ವಜನಿಕರ ವ್ಯಕ್ತಿತ್ವ ವಿಕಸನ ವಿಚಾರದ ಉಪನ್ಯಾಸಕರಾಗಿ ಅವರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದರು.
ಶಿಕ್ಷಣದಿಂದ ಬಹು ಆಯಾಮದ ವ್ಯಕ್ತಿತ್ವ ಮೂಡಿಬರಬೇಕು ಎಂಬದು ಮುಕ್ತಿದಾನಂದಜೀಯವರ ಧ್ಯೇಯ. ವಿದ್ಯಾಶಾಲೆಯ ಶಿಕ್ಷಣ ಪದ್ಧತಿ ಇದನ್ನು ಸಾಕ್ಷೀಕರಿಸುವಲ್ಲಿ ಪ್ರಯೋಜನ ಕಾರಿಯಾಗಿದ್ದರೂ ಸ್ವಾಮಿಜಿ ತಮ್ಮದೇ ಆದ ಕೆಲವು ಆವಿಷ್ಕಾರಗಳನ್ನು ಮಾಡಿದ್ದಾರೆ. ವಿದ್ಯಾರ್ಥಿ ಹೋಮ, ನೇಚರ್ ಸ್ಕೂಲ್, ಗೋಲ್ಡನ್ ಜುಬಿಲಿ ಬ್ಲಾಕ್, ಫ್ರೆಂಡ್ ಆಫ್ ದ ಪುವರ್ ಹಾಗೂ ವಿದ್ಯಾಶಾಲೆಯ ಮತ್ತು ಆವರಣದ ಸಮಗ್ರ ನವೀಕರಣ ಮಾಡುವ ಮೂಲಕ ಪುರಾತನ, ಸಾಂಸ್ಕøತಿಕ ಗುರುಕುಲ ಶಿಕ್ಷಣಕ್ಕೆ ಆಧುನಿಕ ಆವಿಷ್ಕಾರದ ತಿರುವನ್ನು ನೀಡಿದವರು ಸ್ವಾಮಿ ಮುಕ್ತಿದಾನಂದ ಜೀಯವರು ಎಂದರು
ಡಾ. ಶಿವಪ್ಪ ಪ್ರಾರ್ಥಿಸಿದರೆ, ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷ ಶ್ರೀ ಬೋಧಸ್ವರೂಪಾನಂದ ಮಹರಾಜ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಸ್ವಾಮಿ ಮುಕ್ತಿದಾ ನಂದ ಜೀಯವರು ಮಾತನಾಡಿ, ಪೊನ್ನಂಪೇಟೆ ಆಶ್ರಮದಲ್ಲಿ ನಿರ್ಮಿಸಿರುವ ವಿಶ್ವ ಭಾವೈಕ್ಯ ಮಂದಿರದ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಿ ತೊಡಗಿಸಿಕೊಂಡಿದ್ದಲ್ಲದೆ ಆಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿರುತ್ತಾರೆ ಎಂದರು. ಡಾ. ಚಂದ್ರಶೇಖರ್ ನಿರೂಪಿಸಿ ವಂದಿಸಿದರು.
ಸ್ವಾಮಿ ಮುಕ್ತಿದಾನಂದ ಜೀಯವರಿಗೆ ಆಶ್ರಮದ ಮತ್ತು ಅವರ ಅಭಿಮಾನಿ ಬಳಗದಿಂದ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.