ಪೊನ್ನಂಪೇಟೆ, ಸೆ. 22 : ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇಂದು ಅಲ್ಪಸಂಖ್ಯಾತರು ಅಧಿಕಾರಕ್ಕಾಗಿ ಹಾತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಸಿಕ್ಕಿದ ಅಧಿಕಾರ ಕೇವಲ ಸ್ವಹಿತಾಸÀಕ್ತಿಗಾಗಿ ಮಾತ್ರ ಬಳಕೆ ಯಾಗುತ್ತಿರುವದು ದುರಂತವೆನಿಸಿದೆ. ಇದರಿಂದ ಸಮುದಾಯಕ್ಕೆ ಯಾವದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಅಲ್ಪಸಂಖ್ಯಾತರಾದ ಮುಸ್ಲಿಂಮರು ರಾಜಕೀಯದಲ್ಲಿ ಅಧಿಕಾರಕ್ಕಾಗಿ ಮೋಹ ಪಡಬಾರದು ಎಂದು ಅಲ್ಪಸಂಖ್ಯಾತರ ಹಿರಿಯ ಮುಖಂಡ ಗೋಣಿಕೊಪ್ಪಲಿನ ವಿ.ಕೆ ಪೋಕುಟ್ಟಿ ಹೇಳಿದ್ದಾರೆ.
ಪೊನ್ನಂಪೇಟೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಸ್ಲಿಂರ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲಿದ ವಿ.ಕೆ.ಪೋಕುಟ್ಟಿ ಅವರು, ಇಸ್ಲಾಂ ಧರ್ಮದ ನಿಜರೂಪದ ತತ್ವ್ವಾದರ್ಶ ಗಳನ್ನು ಮೈಗೂಡಿಸಿ ಕೊಳ್ಳಬೇಕಾಗಿ ರುವದು ಮುಸ್ಲಿಂರ ಇಂದಿನ ಅನಿವಾರ್ಯತೆಯಲ್ಲಿ ಒಂದಾಗಿದೆ. ಪ್ರವಾದಿಯವರ ಜೀವನ ಸಂದೇಶ ಎಲ್ಲರಿಗೂ ಮಾದರಿಯಾಗಬೇಕಿದೆ. ಮುಸ್ಲಿಮರಿಗೆ ಯಾರು ಶತ್ರುಗಳಿಲ್ಲ. ಶತ್ರುತ್ವ ಕಟ್ಟಿಕೊಳ್ಳುವ ಅಗತ್ಯವೂ ಮುಸ್ಲಿಮರಿಗಿಲ್ಲ. ಇಸ್ಲಾಂನ ನೈಜ ಅನುಯಾಯಿಯಾಗಿ ‘ನಾವು ನಾವಾಗಿ’ ಜೀವಿಸುವದೆ ಇಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ವಾಗಲಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರು ರಾಜಕೀಯ ವಾಗಿ ಇಂದು ಸರಿಯಾದ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಒಗ್ಗಟ್ಟಿನ ಕೊರತೆಯೆ ಪ್ರಮುಖ ಕಾರಣ. ರಾಜಕೀಯ ಪಕ್ಷಗಳಿಂದ ದೊರೆತ ಅಧಿಕಾರ ಸಾಮಾಜಿಕ ಮತ್ತು ಸಮುದಾಯ ಹಿತದೃಷ್ಟಿಗಿಂತ ಹೆಚ್ಚಿನದಾಗಿ ಸ್ವಹಿತಾಸಕ್ತಿಗಷ್ಟೇ ಮೀಸಲಾಗುತ್ತಿದೆ. ದೊರೆತ ಅಧಿಕಾರವನ್ನು ಅಲ್ಪಸಂಖ್ಯಾತರು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಅಧಿಕಾರ ದೊರಕಲು ಸಹಕರಿಸಿದವರನ್ನು ಅಧಿಕಾರ ದೊರೆತವರು ಮೂಲೆಗೆ ತಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಅಲ್ಪಸಂಖ್ಯಾತರ ಹಿನ್ನಡೆಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮಾಜದಲ್ಲಿ ಹಿಂದಿನ ಸಾಮರಸ್ಯ ಮರುಕಳಿಸುವಂತೆ ಮಾಡುವಲ್ಲಿ ಎಲ್ಲರ ಪಾತ್ರವಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಆದರೆ ಈ ಪ್ರಯತ್ನಗಳಲ್ಲಿ ಪ್ರಾಮಾಣಿಕತೆಯೆ ಮೂಲವಾಗಬೇಕು ಎಂದು ಹೇಳಿದರು.