ಚೆಟ್ಟಳ್ಳಿ, ಅ. 16: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯ ಅರೇಬಿಕಾ ತೋಟಗಳಲ್ಲಿ ಮೇ ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಹೂ ಮಳೆಯಾಗಿ ಉತ್ತಮ ಕಾಫಿ ಫಸಲು ಕಟ್ಟಿರುತ್ತದೆ. ಈಗ ಅಕ್ಟೋಬರ್ ತಿಂಗಳ ಎರಡನೇ ವಾರದಿಂದ ಕೆಲವು ತೋಟಗಳಲ್ಲಿ ಕಾಫಿ ಹಣ್ಣಾಗಲು ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಹಣ್ಣಾಗುವದು ಅಸಹಜವೇನಲ್ಲ. ಇದು ಸಹಜ ಪ್ರಕ್ರಿಯೆಯೇ ಆಗಿದೆ ಎಂದು ಸೋಮವಾರಪೇಟೆ ತಾಲೂಕಿನ ಹಿರಿಯ ಸಂಪರ್ಕಾಧಿಕಾರಿ ಮುರುಳೀದರ್ ತಿಳಿಸಿದ್ದಾರೆ. ಈಗ ಸಿಗುವ ಹಣ್ಣುಗಳನ್ನು ಬೆಳೆಗಾರರು ತಮ್ಮ ತೋಟಗಳಲ್ಲಿ ತಾವೇ ಬೀಜೋತ್ಪಾದನೆ ಮಾಡಲು ಬಳಸಿಕೊಳ್ಳಬಹುದು.

ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವದರಿಂದ ಕಾಫಿ ಹಣ್ಣಿನಲ್ಲಿ ರಸ ಕಡಿಮೆ ಇದ್ದು ಕಾಫಿ ಹಣ್ಣಿನ ಸಿಪ್ಪೆ ಬೀಜಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಇದರಿಂದ ಕಾಫಿ ಹಣ್ಣುಗಳನ್ನು ಪಲ್ಪ್ ಮಾಡುವಾಗ ಕಾಫಿ ಬೀಜಕ್ಕೆ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಆದುದರಿಂದ ಅರೇಬಿಕಾ ಬೆಳೆಗಾರರು ತಾವು ಕುಯ್ಲು ಮಾಡಿದ ಹಣ್ಣುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಿ ನಂತರ ಹಣ್ಣುಗಳನ್ನು ಪಲ್ಪ್ ಮಾಡುವದರಿಂದ ಕಾಫಿ ಬೀಜಗಳಿಗೆ ಆಗುವ ಹಾನಿಯನ್ನು ತಡೆಗಟ್ಟಬಹುದು ಮತ್ತು ಇದರಿಂದ ಕಾಫಿಯ ಗುಣಮಟ್ಟ ಹೆಚ್ಚಾಗುತ್ತದೆ.

ಈ ರೀತಿ ತಯಾರಿಸಿದ ಕಾಫಿಯಲ್ಲಿ ಶೇ. 50-55 ನೀರಿನ ಅಂಶವಿರುತ್ತದೆ. ನಂತರ ಸೂರ್ಯನ ಬೆಳಕಿನಲ್ಲಿ ಸಿಮೆಂಟ್ ಅಥವಾ ಹೆಂಚಿನ ಕಣದ ಮೇಲೆ ನಿಗದಿತ ಮಟ್ಟದ ತೇವಾಂಶ ಬರುವವರೆಗೆ (ಶೇ. 11.0) ಒಣಗಿಸಬೇಕು. ಪಾಚ್ರ್ಮೆಂಟ್ ಕಾಫಿಯನ್ನು ಕಣದಲ್ಲಿ 4 ರಿಂದ 7 ಸೆಂ.ಮೀ. ದಪ್ಪವಾಗಿ ಹರಡಬೇಕು. ತುಂಬಾ ತೆಳುವಾಗಿ ಹರಡುವದರಿಂದ ಪಾಚ್ರ್ಮೆಂಟ್ ಸಿಪ್ಪೆ ಒಡೆದು ಬಿರುಕು ಬಿಡುತ್ತದೆ. ಕಾಫಿಯನ್ನು ಗಂಟೆಗೆ ಒಂದುಸಲ ಮೆತ್ತಗೆ ತಿರುಗಿಸಿ ಹರಡಬೇಕು. ಸಂಜೆ ಹೊತ್ತಿಗೆ ಬೀಜಗಳನ್ನು ರಾಶಿಮಾಡಿ ಮುಚ್ಚಬೇಕು. ಒಣಗುತ್ತಿರುವ ಕಾಫಿಯನ್ನು ಇಬ್ಬನಿ ಇರುವಾಗ ತೆರೆದಿಡಬಾರದು. ಹೀಗೆ ಶೇ. 11 ರ ತೇವಾಂಶಕ್ಕೆ ಒಣಗಿಸಿದ ಕಾಫಿಯನ್ನು ಶುದ್ಧವಾದ ಹೊಸ ಗೋಣಿ ಚೀಲಗಳಲ್ಲಿ ತುಂಬಿ ಶೇಖರಿಸಬೇಕು. ಈ ರೀತಿಯಲ್ಲಿ ಪಾಚ್ರ್ಮೆಂಟ್ ತಯಾರಿಸುವದರಿಂದ ಬೆಳೆಗಾರರು ಉತ್ತಮ ಗುಣಮಟ್ಟದ ಕಾಫಿ ತಯಾರಿಸಿಕೊಳ್ಳಬಹುದೆಂದರು.