ವೀರಾಜಪೇಟೆ, ಆ. 19: ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ನಡೆದ 158ನೇ ‘ಹೊಂಬೆಳಕು’ ಮಾಸಿಕ ತತ್ವಚಿಂತನಾ ಗೋಷ್ಠಿಯಲ್ಲಿ ‘ಸಿರಿಭೂವಲಯ’ ಎಂಬ ಕೃತಿಯ ಕುರಿತು ಡಾ. ಎಸ್.ವಿ. ನರಸಿಂಹನ್ ಉಪನ್ಯಾಸ ನೀಡಿದರು.

ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿನ ಯಲವಳ್ಳಿಯ ಕುಮುದೇಂದು ಎಂಬ ಜೈನ ಮುನಿಯಿಂದ ‘ಸಿರಿಭೂವಲಯ’ 8ನೇ ಶತಮಾನದಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷನ ಕಾಲದಲ್ಲಿ ರಚಿಸಲ್ಪಟ್ಟಿದೆ. 1270 ಪುಟಗಳಿರುವ ಈ ಗ್ರಂಥದಲ್ಲಿ 59 ಅಧ್ಯಾಯಗಳಿವೆ. ಇದರ ಅಪೂರ್ವ ವಿಷಯ ವ್ಯಾಪ್ತಿಯಲ್ಲಿ ವೈದ್ಯ, ಜ್ಯೋತಿಷ್ಯ, ಭೌತರಸಾಯನಾದಿ ಮೂಲವಿಜ್ಞಾನ, ಇತಿಹಾಸ-ಸಂಸ್ಕೃತಿ, ಗಣಿತ, ಅಣುಶಾಸ್ತ್ರ, ಜಲ-ಲೋಹಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಜೈನಸಿದ್ಧಾಂತ, ಧರ್ಮದರ್ಶನ ಶಾಸ್ತ್ರ, ವೇದ, ರಾಮಾಯಣ-ಭಗವದ್ಗೀತೆ, ಲಿಪಿ-ಭಾಷೆ, ಮುಂತಾದ ವಿಷಯಗಳಿವೆ ಎಂದರು. ಅಕ್ಷರ ಮತ್ತು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ‘ಸಿರಿಭೂವಲಯ’ ಗ್ರಂಥವನ್ನು ರಚಿಸ ಲಾಗಿದೆ. ಗ್ರಂಥವು ಸಂಪೂರ್ಣವಾಗಿ ಸಂಖ್ಯೆಗಳಿಂದ ಕೂಡಿದ್ದು, ಯಾವ ಅಕ್ಷರಗಳೂ ಇದರಲ್ಲಿಲ್ಲ. ಪ್ರತಿಯೊಂದು ಪುಟದಲ್ಲಿಯೂ 27 ಸಾಲು ಹಾಗೂ 27 ಕಂಬಗಳು, ಹೀಗೆ 729 ಮನೆಗಳುಳ್ಳ ಒಂದು ವ್ಯವಸ್ಥೆ. ಈ ಮನೆಗಳನ್ನು ವಿವಿಧ 64 ಅಂಕೆಗಳಿಂದ ತುಂಬಲಾಗಿದೆ. ಪ್ರತಿಯೊಂದು ಸಂಖ್ಯೆಯನ್ನು ಒಂದೊಂದು ಕನ್ನಡ ಅಕ್ಷರದಿಂದ ಬದಲಿಸಿ ಸಿದ್ಧಪಡಿಸಿದ ಪುಟವನ್ನು ವಿವಿಧ ಬಂಧಗಳ ಹಾದಿಯಲ್ಲಿ ವಾಚಿಸಿದರೆ ಅಸಂಖ್ಯಾತ ಸಾಹಿತ್ಯವು ಗ್ರಂಥದಿಂದ ದೊರಕುತ್ತದೆ ಎಂದರು. ಚಕ್ರಬಂಧ, ವಿಮಲಾಂಕ ಮತ್ತು ನವಮಾಂಕಬಂಧಗಳು ಗಣಿತದ ಮಾಯಾಚೌಕವನ್ನು ಹೋಲುತ್ತವೆ. ಇದರಲ್ಲಿ 1270 ಚಕ್ರಗಳೂ, 6 ಲಕ್ಷ ಶ್ಲೋಕಗಳೂ, 14 ಲಕ್ಷ ಅಕ್ಷರಗಳೂ ಇವೆ. ಕುಮುದೇಂದುವಿನ ಸಿರಿ ಭೂವಲಯ ಒಟ್ಟು 16,000 ಚಕ್ರಗಳನ್ನೊಳಗೊಂಡ ಒಂಭತ್ತು ಖಂಡಗಳ ಕಾವ್ಯ. ದುರಾದೃಷ್ಟವಶಾತ್ ನಮಗೀಗ ಪ್ರಥಮಖಂಡ ಮಾತ್ರ ಲಭ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ನರಸಿಂಹನ್‍ರವರು ವಿದ್ಯಾರ್ಥಿಗಳಿಗೆ ಮಾಯಾಚೌಕವನ್ನು ತಯಾರಿಸುವ ಸುಲಭ ವಿಧಾನವನ್ನು ತಿಳಿಸಿ, ಮಾಯಾಚೌಕದ ಮೂಲಕ ಸಿರಿಭೂವಲಯವನ್ನು ಕನ್ನಡದಲ್ಲಿ ಓದುವ ವಿಧಾನ ಹಾಗೂ ಅದರೊಂದಿಗೆ ವಿವಿಧ ಬಂಧಗಳನ್ನು ಉಪಯೋಗಿಸಿ ಕನ್ನಡದ ಅಂತರಕಾವ್ಯಗಳನ್ನೂ, ಇತರ ಭಾಷೆಗಳನ್ನು ಹೇಗೆ ಪಡೆಯಬಹುದು ಎಂಬದನ್ನು ತಿಳಿಸಿದರು.

ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕ ಚಂದ್ರಹಾಸ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಶಿಕ್ಷಣ ಕ್ರಮದಲ್ಲಿ ಅನ್ವಯಿಕ ವಿಜ್ಞಾನಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದು, ಮೂಲ ವಿಜ್ಞಾನ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಇಂದು ಗುಣಮಟ್ಟದ ಶಿಕ್ಷಣ ಇಲ್ಲವಾಗಿ ಮೌಲ್ಯಗಳು ಕಡೆಗಣಿಸಲ್ಪಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.