ಮೂರ್ನಾಡು, ನ. 20: ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ವಾರ್ಷಿಕ ಕ್ರೀಡಾಕೂಟ ನಡೆಯಿತು. ಮೂರ್ನಾಡು ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ಆಯೋಜಿಸ ಲಾದ 2ನೇ ವರ್ಷದ ಕ್ರೀಡಾಕೂಟ ವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಫುಟ್‍ಬಾಲ್ ಒದೆಯುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕ್ರೀಡಾಕೂಟಗಳ ಆಯೋಜನೆಯಿಂದ ಸಮಾಜ ಬಾಂಧವರು ಒಂದೆಡೆ ಸೇರಿ ಸ್ನೇಹ, ಬಾಂಧವ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಸೋಲು ಗೆಲುವು ಆಟದಲ್ಲಿ ಸಾಮಾನ್ಯವಾಗಿದ್ದು, ಕ್ರೀಡೆಯಲ್ಲಿ ಪಾಲ್ಗೊಳ್ಳುವದು ಮುಖ್ಯವಾಗಿದೆ. ಜನಾಂಗ ಬಾಂಧವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಇಂದು ಇಂತಹ ಕ್ರೀಡಾಕೂಟಗಳು ಅತ್ಯವಶ್ಯಕವಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಜನಾಂಗ ಬಾಂಧವರನ್ನು ಒಗ್ಗೂಡಿಸಲು ಜನಾಂಗದ ಕ್ರೀಡಾಕೂಟಗಳು ಅವಶ್ಯಕ. ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ತಮ್ಮ ಸಂಸ್ಕøತಿ, ಆಚಾರ, ವಿಚಾರ, ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು. ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜದ ಅಧ್ಯಕ್ಷ ಪಿ.ಕೆ. ಬೆಳ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಗೌರವಾಧ್ಯಕ್ಷ ಪಿ.ಎ. ಕಾರ್ಯಪ್ಪ, ಕಾರ್ಯದರ್ಶಿ ಪಿ.ಎಂ. ಗಣೇಶ್, ವೀರಾಜಪೇಟೆ ತಾಲೂಕು ಸಮಿತಿ ಅಧ್ಯಕ್ಷ ಜಯ ರಾಮ್, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾ ಮೇದಪ್ಪ, ಮಾಲ್ದಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಸಿ. ಸುಬ್ಬಯ್ಯ ಉಪಸ್ಥಿತರಿದ್ದರು.
ಜನಾಂಗ ಬಾಂಧವರಿಗೆ ಕ್ರೀಡಾಕೂಟದ ಪ್ರಯುಕ್ತ ಪುರುಷರಿಗೆ ಫುಟ್‍ಬಾಲ್, ಕಬಡ್ಡಿ ಮಹಿಳೆಯರಿಗೆ ಥ್ರೋಬಾಲ್, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, ಮಕ್ಕಳಿಗೆ ಓಟದ ಸ್ಪರ್ಧೆಗಳು ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಜನಾಂಗ ಬಾಂಧವರು ಹಿರಿಯರು ಕಿರಿಯರೆನ್ನದೆ ಕ್ರೀಡೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಾರ್ತಾ ಇಲಾಖೆಯ ಪಿ.ಎಸ್. ಗಣೇಶ್, ಕಂಡಿಮಕ್ಕಿ ಪಿ.ಆರ್. ಮಧು, ಬಾಳುಗೋಡು ಪಿ.ಎಸ್. ಯತೀಶ್ ಬಿದ್ದಪ್ಪ ಆಗಮಿಸಿದ್ದರು. ಮೂರ್ನಾಡು ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಡಿ. ನಾಗರಾಜ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ ದರು. ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಪಿ.ಎಸ್. ಯತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕೊಡಗು ಮೂಲನಿವಾಸಿ ಅರಮನೆ ಪಾಲೆ ಸಮಾಜದ ನಾಪೋಕ್ಲು ಗ್ರಾಮ ಸಮಿತಿ ಅಧ್ಯಕ್ಷ ಪಿ.ಸಿ. ಮುತ್ತಪ್ಪ, ನೆಲಜಿ ಗ್ರಾಮ ಸಮಿತಿ ಅಧ್ಯಕ್ಷ ಪಿ.ಸಿ. ಚೆನಿಯಾ, ಚೇಲಾವರ ಗ್ರಾಮ ಸಮಿತಿ ಅಧ್ಯಕ್ಷೆ ಸುಬ್ಬಕ್ಕಿ, ಮುಕ್ಕೋಡ್ಲು ಗ್ರಾಮ ಸಮಿತಿ ಅಧ್ಯಕ್ಷ ಮೇದಪ್ಪ, ಹಾಲೇರಿ ಗ್ರಾಮ ಸಮಿತಿ ಅಧ್ಯಕ್ಷ ಕಾರ್ಯಪ್ಪ, ಬಾಳುಗೋಡು ಗ್ರಾಮ ಸಮಿತಿ ಅಧ್ಯಕ್ಷೆ ಕಮಲ, ಪಾಲೆಮಾಡು ಗ್ರಾಮ ಸಮಿತಿ ಅಧ್ಯಕ್ಷ ದೇವಯ್ಯ, ತೀರ್ಪುಗಾರರಾದ ಕಫಿಲ್ ಕುಮಾರ್ ತೇಜಶ್, ಶಿವಪ್ರಸಾದ್, ಇತರರು ಹಾಜರಿದ್ದರು. ಕ್ರೀಡೆಗಳ ವೀಕ್ಷಕ ವಿವರಣೆಯನ್ನು ಪಿ.ಕೆ. ಮಂದಣ್ಣ ನೀಡಿದರು.
ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಳುಗೋಡು (ಪ್ರ), ಕಕ್ಕಬೆ (ದ್ವಿ), ಹಗ್ಗಜಗ್ಗಾಟದಲ್ಲಿ ಕಕ್ಕಬೆ (ಪ್ರ), ಬಾಳುಗೋಡು (ದ್ವಿ), ಕಬ್ಬಡಿಯಲ್ಲಿ ಬಾಳುಗೋಡು (ಪ್ರ), ಹಾಕತ್ತೂರು ಎ (ದ್ವಿ), ಫುಟ್‍ಬಾಲ್ ಪೇರೂರು ತಂಡ (ಪ್ರ), ಕಕ್ಕಬೆ ತಂಡ (ದ್ವಿ) ಬಹುಮಾನ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.