ಮಡಿಕೇರಿ, ನ. 17: ಕರ್ನಾಟಕ ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ ರೂ. 50 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು ರೂ. 8 ಕೋಟಿಯಷ್ಟು ಲಾಭ ಗಳಿಸಿದೆ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ನೂತನ ಅಧ್ಯಕ್ಷ ಎ.ಎನ್. ಮಹೇಶ್ ತಿಳಿಸಿದರು.ದುಬಾರೆ ಜಂಗಲ್ ಲಾಡ್ಜ್‍ಗೆ ಭೇಟಿ ನೀಡಿದ ಸಂದರ್ಭ ಗಿಡನೆಟ್ಟು ವಿಹಾರಧಾಮದ ಚಟುವಟಿಕೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ನಿಗಮದ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಚಟುವಟಿಕೆಗಳೊಂದಿಗೆ ಎಲ್ಲಾ ವಿಹಾರಧಾಮಗಳನ್ನು ಪರಿಸರ ಸ್ನೇಹಿ ಧಾಮಗಳಾಗಿ ರೂಪಿಸಲಾಗುವದು ಎಂದು ತಿಳಿಸಿದರು.

ರಾಜ್ಯದ ಅರಣ್ಯ ಪ್ರದೇಶ ವ್ಯಾಪ್ತಿ ಮತ್ತು ನದಿ ಪಾತ್ರದಲ್ಲಿ ಪ್ರಸ್ತುತ 21 ವಿಹಾರಧಾಮಗಳು ಪರಿಸರ ಪೂರಕ ಚಟುವಟಿಕೆಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇವುಗಳ ಪೈಕಿ 17 ವಿಹಾರಧಾಮಗಳು ನಿಗಮದ ವತಿಯಿಂದ ಮತ್ತು 3 ವಿಹಾರಧಾಮಗಳು ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹೇಶ್ ತಿಳಿಸಿದರು.

ರಾಜ್ಯದಲ್ಲಿ ಮೂಲ ಸೌಕರ್ಯಗಳು ಇರುವ ಕಡೆಗಳಲ್ಲಿ ಹೊಸದಾಗಿ ವಿಹಾರಧಾಮಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ವಿಹಾರಧಾಮಗಳ ಬೆಳವಣಿಗೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚಿಸಲಾಗುವದು ಎಂದರು.

ಈ ಸಂದರ್ಭ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್ ಮತ್ತಿತರರು ಇದ್ದರು.