ಕುಶಾಲನಗರ, ನ. 5: ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಸರ್ಟಿಫೈಡ್ ನೇಚರ್ ಗೈಡ್‍ಗಳ ಸೇವೆ ಆರಂಭಿಸಲಾಗಿದೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಅರಣ್ಯ ಇಲಾಖೆ ಹಾಗೂ ದುಬಾರೆಯ ಜಂಗಲ್ ಲಾಡ್ಜ್ ರೆಸಾರ್ಟ್ ಸಹಯೋಗದಲ್ಲಿ ರೆಸಾರ್ಟ್‍ನಲ್ಲಿ 5 ದಿನಗಳ ಕಾಲ ಹಮ್ಮಿಕೊಳ್ಳಲಾದ ಸರ್ಟಿಫೈಡ್ ನೇಚರ್ ಗೈಡ್ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕೊಡಗು ಜಿಲ್ಲೆಗೆ ಆಗಮಿಸುವ ಬಹುತೇಕ ಪ್ರವಾಸಿಗರಿಗೆ ಇಲ್ಲಿನ ಪರಿಸರದ ಬಗ್ಗೆ ಮಾಹಿತಿಯ ಕೊರತೆ ಕಂಡುಬರುತ್ತಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪರಿಸರದ ಬಗ್ಗೆ ಕನಿಷ್ಟ ಜ್ಞಾನ ಹಾಗೂ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆ ಜಂಗಲ್ ಲಾಡ್ಜ್ ರೆಸಾರ್ಟ್ ಹಾಗೂ ಇಕೋ ಟೂರಿಸಂ ಬೋರ್ಡ್‍ನ ಸಹಭಾಗಿತ್ವದಲ್ಲಿ 100 ಮಂದಿ ನೇಚರ್ ಗೈಡ್‍ಗಳನ್ನು ನಿಯೋಜಿಸಲು ಚಿಂತನೆ ಹರಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸ್ಥಳೀಯ 26 ಮಂದಿಗೆ ಅಗತ್ಯ ತರಬೇತಿ ಒದಗಿಸಲು ಶಿಬಿರ ಹಮ್ಮಿಕೊಂಡಿರುವದಾಗಿ ತಿಳಿಸಿದರು.

ಶಿಬಿರಾರ್ಥಿಗಳಿಗೆ ಪ್ರಮುಖವಾಗಿ ಟ್ರಕ್ಕಿಂಗ್ ವ್ಯವಸ್ಥೆ, ಅರಣ್ಯ ಇಲಾಖೆ ಕಾನೂನಿನ ಅರಿವು, ಪ್ರಾಣಿ-ಪಕ್ಷಿ, ಮರ-ಗಿಡಗಳ ವಿವರ, ಪರಿಸರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತರಬೇತಿಯೊಂದಿಗೆ ಟ್ರಕ್ಕಿಂಗ್ ಸಂದರ್ಭ ಅವಘಡಗಳು ಸಂಭವಿಸಿದಲ್ಲಿ ಅಗತ್ಯ ಪ್ರಾಥಮಿಕ ಚಿಕಿತ್ಸೆ ಒದಗಿಸುವ ಬಗ್ಗೆ ಶಿಬಿರದಲ್ಲಿ ಮಾರ್ಗದರ್ಶನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಜಂಗಲ್ ಲಾಡ್ಜ್ ರೆಸಾರ್ಟ್‍ನ ಮುಖ್ಯ ನಿಸರ್ಗವಾದಿ ಕಾರ್ತಿಕೇಯನ್, ಓಜೋನ್ ಸಂಸ್ಥೆಯಿಂದ ವಿನಯ್ ಸಿರ್ಸಿ, ಇಕೋ ಟೂರಿಸಂ ನಾಯಕ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿಮಾ, ಅರಣ್ಯ ಕಾಲೇಜು ಮುಖ್ಯಸ್ಥರಾದ ಡಾ. ಕುಶಾಲಪ್ಪ, ಸೃಂಗೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಹಲವು ರೀತಿಯ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸಿದರು.

ಈ ಸಂದರ್ಭ ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಇದ್ದರು.