ಸೋಮವಾರಪೇಟೆ, ಜ. 19: ಅರಣ್ಯಕ್ಕೆ ಹೊಂದಿಕೊಂಡಂತಿರುವ ಹಾಡಿಗಳಲ್ಲಿ ವಾಸಿಸುತ್ತಿರುವ ಮಂದಿಗೆ ವಾಸದ ಬಗ್ಗೆ ಶಿಫಾರಸ್ಸು ನೀಡಬಾರದೆಂದು ಅರಣ್ಯ ಇಲಾಖೆ ಪತ್ರ ಕಳುಹಿಸಿದ್ದು, ಇದರಿಂದಾಗಿ ಹಾಡಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಿದೆ ಎಂದು ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಹಕ್ಕು ಸಮಿತಿ ಸಭೆ ಪಂಚಾಯಿತಿ ಅಧ್ಯಕ್ಷರಾದ ಕೆ.ಪಿ. ರಾಯ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಆವರಣದಲ್ಲಿ ನಡೆದ ಸಂದರ್ಭ ಈ ಬಗ್ಗೆ ವಿಸ್ತøತ ಚರ್ಚೆ ನಡೆದು, ಅರಣ್ಯ ಇಲಾಖೆಯ ಕ್ರಮವನ್ನು ಹಾಡಿವಾಸಿಗಳು ಖಂಡಿಸಿದರು.

ಸೂಳೆಬಾವಿ, ಕೂಪಾಡಿ, ಸಜ್ಜಳ್ಳಿ, ಕಮ್ಮತಳ್ಳಿ, ರಂಗನಾಡಿ ಹಾಡಿಗಳ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡು ಹಾಡಿಯಲ್ಲಿನ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕೂಪಾಡಿ ಹಾಡಿಯ ಡಿ.ಎಲ್. ರವಿ ಮಾತನಾಡಿ, ಅರಣ್ಯ ಇಲಾಖೆಯವರು ಹಾಡಿಯಲ್ಲಿ ವಾಸಮಾಡುತ್ತಿರುವವರಿಗೆ ವಾಸದ ಶಿಫಾರಸ್ಸು ಪತ್ರಗಳನ್ನು ನೀಡಬಾರದೆಂದು ಸಮಿತಿಗೆ ಪತ್ರ ಹಾಕಿದ್ದಾರೆ ಎಂದು ತಿಳಿಸಿದರಲ್ಲದೆ, ಅರಣ್ಯ ಇಲಾಖೆಯವರ ಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ನಂತರ ಸಮಿತಿ ಹಾಡಿಗಳಲ್ಲಿ ವಾಸವಿರುವವರಿಗೆ ವಾಸದ ಶಿಫಾರಸ್ಸು ಪತ್ರ ನೀಡಲು ತೀರ್ಮಾನಿಸಿತು.

ಸೂಳೆಬಾವಿ ಹಾಡಿಯ ಮುಖಂಡ ವಸಂತ್ ಮಾತನಾಡಿ, ಹಾಡಿ ನಿವಾಸಿಗಳಿಗೆ ಕೃಷಿ ಜಾಗದ ಹಕ್ಕು ಪತ್ರ ನೀಡಿದ್ದು, 2.80ಸೆಂಟ್ ಸ್ಥಳಕ್ಕೆ ಮನೆ ನಿವೇಶನ ಎಂದು ಹಕ್ಕು ಪತ್ರ ನೀಡಿರುವದರಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಈ ಸಂದರ್ಭ ಅರಣ್ಯ ಹಕ್ಕು ಸಮಿತಿ ಸದಸ್ಯ ಕೆ.ಪಿ. ದಿನೇಶ್ ಮಾತನಾಡಿ, ಹಾಡಿಗಳಲ್ಲಿ ವಾಸವಿರುವ ಎಲ್ಲರಿಗೂ ಪಹಣಿ ಪತ್ರ ಮಾಡಿಕೊಡುವಂತೆ ಕಂದಾಯ ಇಲಾಖೆ ಮತ್ತು ಸಮಾಜಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಲು ಹೇಳಿದರು.

ಕಮ್ಮತಳ್ಳಿ ಹಾಡಿಯು ಇರುವ ಬಗ್ಗೆ ಇದುವರೆಗೂ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ಇಲ್ಲ. ಹಾಡಿಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಸಮಿತಿ ಸದಸ್ಯ ಎಂ.ಎನ್. ಅಶೋಕ್ ದೂರಿದರು.

ಸಜ್ಜಳ್ಳಿ ಹಾಡಿಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸ್ಥಳ ಗುರುತಿಸಲಾಗಿದ್ದರೂ, ಇಲ್ಲಿಯವರೆಗೆ ಕೊಳವೆಬಾವಿ ಕೊರೆಸಲು ಇಲಾಖೆ ಮುಂದಾಗಿಲ್ಲ ಎಂದು ಸಜ್ಜಳ್ಳಿ ನಿವಾಸಿಗಳು ಆರೋಪಿಸಿ, ಕೂಡಲೇ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಕೆ.ಪಿ. ರಾಯ್, ಹಾಡಿಗೆ ತೆರಳುವ ರಸ್ತೆ ವ್ಯವಸ್ಥೆ ಸರಿ ಇಲ್ಲದೆ ಇರುವದರಿಂದ ಲಾರಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದು, ಒಂದು ವಾರದಲ್ಲಿ ರಸ್ತೆ ವ್ಯವಸ್ಥೆ ಕಲ್ಪಿಸಿ ಕೊಳವೆಬಾವಿ ತೆಗೆಯಲು ಪ್ರಯತ್ನಿಸಲಾಗುವದು ಎಂದು ಸಭೆಗೆ ತಿಳಿಸಿದರು.

ತಾಲೂಕಿನ ಎಲ್ಲಾ ಹಾಡಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸಮಿತಿಯವರು ಮನವಿ ಮಾಡಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಐಗೂರು ಪಂಚಾಯಿತಿ ಉಪಾಧ್ಯಕ್ಷೆ ಕೆ.ಪಿ. ಶೋಭ, ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಡಿ.ಎಂ. ರಮೇಶ, ಮಂಜುಳ, ಸವಿತ, ಜೆ.ಎಲ್. ವಸಂತ, ಅಣ್ಣಯ್ಯ, ಕಮಲಾಕ್ಷಿ ಉಪಸ್ಥಿತರಿದ್ದರು. ಸಭೆಗೆ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಗೈರಾಗಿದ್ದಕ್ಕೆ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.