ಭಾಗಮಂಡಲ, ಜೂ. 20: ಇಲ್ಲಿಗೆ ಸಮೀಪದ ಅಯ್ಯಂಗೇರಿ ಹಾಗೂ ಭಾಗಮಂಡಲ - ಕರಿಕೆ ರಸ್ತೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡು ಭೀತಿ ಸೃಷ್ಟಿಸಿವೆ.

ಇದುವರೆಗೆ ಕಾಡಾನೆಗಳ ಸುಳಿವೇ ಇರದಿದ್ದ ಅಯ್ಯಂಗೇರಿಯಲ್ಲಿ ದಿಢೀರಾಗಿ ಮೂರು ಕಾಡಾನೆಗಳು ಪ್ರತ್ಯಕ್ಷಗೊಂಡಿವೆ. ಅಲ್ಲಿನ ನಿವಾಸಿ ಬಿದ್ದಿಯಂಡ ಮಾಚಯ್ಯ ಅವರ ತೋಟದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಜನತೆಯಲ್ಲಿ ಭೀತಿಯನ್ನುಂಟು ಮಾಡಿವೆ. ರಸ್ತೆ ಬದಿಯ ತೋಟವಾಗಿರುವದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಓಡಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದರಾದರೂ ಆನೆಗಳು ಹೋಗುತ್ತಿಲ್ಲ. ತೋಟದಲ್ಲಿಯೇ ಬೀಡುಬಿಟ್ಟು ನಷ್ಟವುಂಟುಮಾಡಿವೆ.

ಕರಿಕೆ ರಸ್ತೆಯಲ್ಲಿ ಮೊನ್ನೆ ದಿನ ಹಗಲು ಕೇರಳದ ಪಾಣತ್ತೂರುವಿನ ಉದ್ಯಮಿ ಜೋಯಿ ಎಂಬವರು ಕಾರಿನಲ್ಲಿ ಬರುತ್ತಿದ್ದಾಗ ಕಾಡಾನೆ ಎದುರುಗೊಂಡಿದೆ. ಆನೆಯನ್ನು ನೋಡಿ ಜೋಯಿ ಕಾರು ನಿಲ್ಲಿಸಿದ್ದು, ಏಕಾಏಕಿ ಆನೆ ಓಡಿ ಬಂದು ಕಾರಿಗೆ ಗುದ್ದಿದೆ. ಆನೆಯ ಎರಡು ದಂತಗಳು ಕಾರಿನೊಳಗೆ ನುಗ್ಗಿವೆ. ಆ ಕ್ಷಣದಲ್ಲಿ ರಸ್ತೆಯಲ್ಲಿ ಲಾರಿಯೊಂದು ಬಂದ ಕಾರಣ ಅದನ್ನು ನೋಡಿ ಆನೆ ಓಡಿ ಹೋಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.