ಗೋಣಿಕೊಪ್ಪಲು, ನ. 27 : ಹಾತೂರು ಯೂತ್ ಕ್ಲಬ್ ಹಾಗೂ ಹಾಕಿ ಕೂರ್ಗ್ ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪ ಹಾಕಿ ಕಪ್ನ್ನು ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ಮುಡಿಗೇರಿಸಿಕೊಂಡಿದೆ. ಕಪ್ ಗೆಲ್ಲುವ ಫೇವರೆಟ್ ತಂಡ ಎನಿಸಿಕೊಂಡ ಅತಿಥೇಯ ಹಾತೂರು ಯೂತ್ ಕ್ಲಬ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಂತಿಮ ಹಣಾಹಣಿಯಲ್ಲಿ ಅಮ್ಮತ್ತಿ ತಂಡವು ಹಾತೂರು ತಂಡವನ್ನು 4-3 ಗೋಲುಗಳ ಮೂಲಕ ಸೋಲಿಸಿತು. ಅಮ್ಮತ್ತಿ ಪರ 14 ಹಾಗೂ 50 ನೇ ನಿಮಿಷದಲ್ಲಿ ಮಹೇಂದ್ರ, 34 ನೇ ನಿಮಿಷದಲ್ಲಿ ಮುಖೇಶ್ ನಾಣಯ್ಯ, 39 ನೇ ನಿಮಿಷದಲ್ಲಿ ವೀರ ತಮಿಳ್ ಗೋಲು ಹೊಡೆದರು. ಹಾತೂರು ಪರ 17 ಹಾಗೂ 58 ನೇ ನಿಮಿಷದಲ್ಲಿ ಜಿ ಎಂ ಪ್ರಥ್ವಿ, 53 ನೇ ನಿಮಿಷದಲ್ಲಿ ಕುಶಾಗೌಡ ಗೋಲು ಹೊಡೆದರು. ಅಮ್ಮತ್ತಿ ತಂಡಕ್ಕೆ 7, ಹಾತೂರು ತಂಡಕ್ಕೆ 6 ಪೆನಾಲ್ಟಿ ಕಾರ್ನರ್ ದೊರೆಯಿತು.
ಹಾತೂರು ತಂಡದ ಮುನ್ನಡೆ ಆಟಗಾರರು ಮುನ್ನುಗ್ಗಿ ಆಟವಾಡುವ ಮೂಲಕ ಅಭಿಮಾನಿಗಳಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದರು. ಪಂದ್ಯದ ಉತ್ತರಾರ್ಧದಲ್ಲಿ ಅಮ್ಮತ್ತಿ ತಂಡ ಹೋರಾಟದ ಆಟ ಪ್ರದರ್ಶಿಸಿತು. ಹಾತೂರು ಪರ ಪ್ರಥ್ವಿ ಎರಡು ಪೆನಾಲ್ಟಿ ಕಾರ್ನರ್ನ್ನು ಗೋಲಾಗಿ ಪರಿವರ್ತಿಸಿದರು.
ಕೊನೆಯ 15 ನಿಮಿಷಗಳ ಅವಧಿಯಲ್ಲಿ ಅಮ್ಮತ್ತಿ ತಂಡದ ಆಟಗಾರ ಕಂಬೇಯಂಡ ಬೋಜಣ್ಣ ಹಾತೂರು ತಂಡದ ಆಟಗಾರ ಕುಶನಿಗೆ ಸ್ಟಿಕ್ನಿಂದ ಹೊಡೆಯುವ ಪ್ರಯತ್ನ ಮಾಡಿದ್ದರಿಂದ ರೆಡ್ ಕಾರ್ಡ್ ಮೂಲಕ
(ಮೊದಲ ಪುಟದಿಂದ) ಪಂದ್ಯದಿಂದ ಹೊರಗುಳಿ ಯುವಂತಾಯಿತು.
ಉತ್ತಮ ಆಟ ಪ್ರದರ್ಶಿಸಿದ ಬೋಜಣ್ಣ ಅವರ ನಡೆ ಕ್ರೀಡಾಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಕುಶ ಅವರ ಸ್ಟಿಕ್ ಬೋಜಣ್ಣ ಅವರ ಹಣೆಗೆ ಬಡಿದು ಗಾಯವಾಯಿತು. ಈ ಸಂದರ್ಭ ಕುಶ ಅವರನ್ನು ಥಳಿಸಲು ಮುಂದಾಗಿದ್ದರಿಂದ ಸಹ ಆಟಗಾರರು ತಡೆದರು. ಇದೇ ವಿಷಯದಲ್ಲಿ 5 ನಿಮಿಷಗಳ ಕಾಲ ಪಂದ್ಯ ಸ್ಥಗಿತವಾಯಿತು.
ಇಂತಹ ನಡೆಯನ್ನು ಕ್ರೀಡಾಭಿಮಾನಿಗಳು ವಿರೋಧಿಸುವ ಮೂಲಕ ಇಂತಹ ಆಟಗಾರರನ್ನು ಮುಂದಿನ ಪಂಧ್ಯಗಳಲ್ಲಿ ಆಡಿಸಬಾರದು ಎಂದು ಒತ್ತಾಯಿಸಿದರು. ಗ್ಯಾಲರಿಯಲ್ಲಿ ಕೂಡ ಅಭಿಮಾನಿಗಳು ಗುಂಪಾಗಿ ನಿಂತು ಖಂಡಿಸಿದರು.
ಗಣಪತಿ ಸರಣಿ ಶ್ರೇಷ್ಠ : ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾತೂರು ತಂಡದ ಎಂ ಬಿ ಗಣಪತಿ ಪಡೆದುಕೊಂಡರು. ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಅಮ್ಮತ್ತಿ ತಂಡದ ದಿಲನ್, ಡಿಫೆಂಡರ್ ಆಗಿ ಚಾರ್ಮರ್ಸ್ ತಂಡದ ಅಲನ್ ದೇವಯ್ಯ, ಬೆಸ್ಟ್ ಆಫ್ ಪ್ರಶಸ್ತಿಯನ್ನು ಹಾತೂರು ತಂಡದ ಪ್ರಥ್ವಿರಾಜ್, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಅಮ್ಮತ್ತಿಯ ವೀರಾ ತಮಿಳ್ ಪಡೆದುಕೊಂಡರು.
ವೀಕ್ಷಕ ವಿವರಣೆಯನ್ನು ಚೆಪ್ಪುಡೀರ ಕಾರ್ಯಪ್ಪ, ಸುಳ್ಳಿಮಾಡ ಸುಬ್ಬಯ್ಯ ಹಾಗೂ ಅಜ್ಜಮಾಡ ಪೊನ್ನಪ್ಪನೀಡಿದರು. ತಾಂತ್ರಿಕ ವರ್ಗದಲ್ಲಿ ಕುಪ್ಪಂಡ ದಿಲನ್, ಹರಿಣಾಕ್ಷಿ, ಗಣಪತಿ, ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್ ಹಾಗೂ ಕೊಂಡೀರ ಕೀರ್ತಿ, ಪಂದ್ಯಾವಳಿಯ ಫಿಸಿಯೋ ಆಗಿ ಶರತ್ ಕಾರ್ಯನಿರ್ವಹಿಸಿದರು.
5 ದಿನಗಳ ಕಾಲ ನಡೆದ ಟೂರ್ನಿಯಲ್ಲಿ 14 ತಂಡಗಳು ಸೆಣೆಸಾಟ ನಡೆಸಿದವು. ಅಂತಿಮ ಸುತ್ತಿಗೆ ಬಂದ ಹಾತೂರು ಹಾಗೂ ಅಮ್ಮತ್ತಿ ತಂಡದೊಂದಿಗೆ ಯುಎಸ್ಸಿ ರೆಡ್, ಡ್ರಿಬಲ್ ಹೆಂಪ್, ಅಮ್ಮತ್ತಿ ಈಗಲ್ಸ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಕೋಣನಕಟ್ಟೆ, ಎಸ್ಆರ್ಸಿ ಕಾಕೋಟುಪರಂಬು, ಚಾರ್ಮರ್ಸ್, ಯುಎಸ್ಸಿ ಗ್ರೀನ್, ಮೂರ್ನಾಡ್, ಬೇತು ಯೂತ್ ಕ್ಲಬ್, ಇವೈಸಿ ಬೇಗೂರು ಹಾಗೂ ಆರ್ಎಸ್ಸಿ ಬಾಡಗ ಭಾಗವಹಿಸಿದ್ದವು.
ಸಮಾರೋಪ
ತೋರ ಗ್ರಾಮದ ತಂಡದಿಂದ ಉರ್ಟಿಕೊಟ್ಟ್ ಆಟ್ ಮೂಲಕ ಟೂರ್ನಿಗೆ ಸಂಭ್ರಮದ ತೆರೆ ಕಂಡಿತು. ಅತಿಥಿಯಾಗಿ ಆಗಮಿಸಿದ್ದ ಹಾಕಿ ಕರ್ನಾಟಕ ಕಾರ್ಯದರ್ಶಿ ಅಂಜಪರವಂಡ ಸುಬ್ಬಯ್ಯ ಮಾತನಾಡಿ, ಭಾರತ ಕಿರಿಯ ಹಾಕಿ ತಂಡದಲ್ಲಿ ಕೊಡಗು ಜಿಲ್ಲೆಯ ಅಟಗಾರರು ಕಾಣುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಕಿರಿಯರ ಹಾಕಿ ಆಟಕ್ಕೆ ಪ್ರೋತ್ಸಾಹದ ಅವಶ್ಯಕತೆ ಇದೆ. ಇದರಿಂದ ಭವಿಷ್ಯದಲ್ಲಿ ಹೆಚ್ಚು ಅಂತರರಾಷ್ಟ್ರೀಯ ಆಟಗಾರರನ್ನು ನೋಡುವ ಅವಕಾಶ ಸಿಗಲಿದೆ ಎಂದರು. ಈ ಸಂದರ್ಭ ಹಾತೂರು ಯೂತ್ ಕ್ಲಬ್ ಅಧ್ಯಕ್ಷ ಬಾಂಡ್ ಗಣಪತಿ, ಹಾಕಿಕೂರ್ಗ್ ಕಾರ್ಯದರ್ಶಿ ಪಳಂಗಂಡ ಲವಕುಮಾರ್, ಪಂದ್ಯಾವಳಿ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ದಾನಿ ಉಮ್ಮಟ್ಟೀರ ಕಿಲನ್ ಗಣಪತಿ ಉಪಸ್ಥಿತರಿದ್ದರು.