ಮಡಿಕೇರಿ, ಡಿ. 11: ನಗರದ ಸಂತ ಮೈಕಲರ ದೇವಾಲಯ ಹಾಗೂ ಧರ್ಮಕೇಂದ್ರದ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕ್ರಿಸ್ಮಸ್ ಪುಟ್ಬಾಲ್ ಕಪ್‍ನ್ನು ಅಮ್ಮತ್ತಿ ಎ ತಂಡ ಮುಡಿಗೇರಿಸಿಕೊಂಡಿದೆ.
ಕಳೆದೆರಡು ದಿನಗಳಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ಕ್ರೈಸ್ತ ಧರ್ಮಕೇಂದ್ರಗಳ ನಡುವಿನ ಕ್ರಿಸ್ಮಸ್ ಕಪ್ ಪುಟ್ಬಾಲ್ ಪಂದ್ಯಾಟ ಸಮಾರೋಪಗೊಂಡಿದೆ. ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯಾಟದಲ್ಲಿ ಪಾಲಿಬೆಟ್ಟ ತಂಡವನ್ನು ಮಣಿಸಿದ ಅಮ್ಮತ್ತಿ ಎ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಗೋಲು ಗಳಿಸಲು ಎರಡೂ ತಂಡಗಳು ವಿಫಲವಾಗಿದ್ದವು. ದ್ವಿತೀಯಾರ್ಧದಲ್ಲಿ ಪೆನಾಲ್ಟಿ ಅವಕಾಶ ಪಡೆದ ಅಮ್ಮತ್ತಿ ಎ ತಂಡದ ಪರ ಜೋಬಿ ಆಂಟೋನಿ 1 ಗೋಲು ಗಳಿಸುವಲ್ಲಿ ಸಫಲರಾದರು. ಇದರ ಬೆನ್ನಲ್ಲೇ ಅಮ್ಮತ್ತಿ ಎ ತಂಡದ ವಿಲ್ಸನ್ ಮಸ್ಕರಿನಸ್ ಮತ್ತೊಂದು ಗೋಲು ದಾಖಲಿಸುವ ಮೂಲಕ ತಮ್ಮ ತಂಡದ ಜಯವನ್ನು ಖಚಿತಪಡಿಸಿದರು. ಅಂತಿಮ ಹಂತದಲ್ಲಿ ಪಾಲಿಬೆಟ್ಟ ತಂಡದ ಪರ ಸಾಲೋಮಾನ್ ರೋಶನ್ 1 ಗೋಲು ದಾಖಲಿಸಿ ಗೆಲುವಿಗೆ ಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಮ್ಮತ್ತಿ ಎ ತಂಡ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಪಾಲಿಬೆಟ್ಟ ಎ ತಂಡ ವಿರಾಜಪೇಟೆ ಬಿ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಅಮ್ಮತ್ತಿ ಎ ತಂಡ ಅಮ್ಮತ್ತಿ ಸಿ ತಂಡದ ವಿರುದ್ಧ 3-0 ಗೋಲುಗಳಿಂದ ವಿಜಯಶಾಲಿಯಾಯಿತು.
ಟಾಪ್ ಸ್ಕೋರರ್ ಪ್ರಶಸ್ತಿಯನ್ನು ಅಮ್ಮತ್ತಿ ಎ ತಂಡದ ವಿಲ್ಸನ್ ಮಸ್ಕರಿನಸ್ 7 ಗೋಲು ದಾಖಲಿಸುವ ಮೂಲಕ ತಮ್ಮದಾಗಿಸಿಕೊಂಡರು. ಬೆಸ್ಟ್ ಗೋಲ್‍ಕೀಪರ್ ಪ್ರಶಸ್ತಿಯನ್ನು 4 ಗೋಲು ತಡೆಯುವ ಮೂಲಕ ಅಮ್ಮತ್ತಿ ಸಿ ತಂಡದ ಅಲೆನ್ ಜೋಸೆಫ್ ಪಡೆದುಕೊಂಡರು. ಪಾಲಿಬೆಟ್ಟ ಎ ತಂಡದ ಸಾಲೋಮನ್ ರೋಶನ್ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದುಕೊಂಡರೆ, ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಯನ್ನು ಚೆಟ್ಟಳ್ಳಿಯ ರಂಜಿತ್ ಪಡೆದುಕೊಂಡರು.
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಕೊಡಗು ವಲಯದ ಶ್ರೇಷ್ಠಗುರು ಫಾ. ಮದಲೈಮುತ್ತು ಉದ್ಘಾಟಿಸಿದರು.
ಸಂತ ಮೈಕಲರ ದೇವಾಲಯದ ಧರ್ಮಗುರು ಫಾ. ಆಲ್ಪ್ರೆಡ್ ಜಾನ್ ಮೆಂಡೋನ್ಸಾ, ಸಂತ ಮೈಕಲರ ದೇವಾಲಯದ ಸಹಾಯಕ ಗುರುಗಳಾದ ಫಾ ರೋಹನ್, ಸಂತ ಮೈಕಲರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಜಾನ್ಸನ್, ನಗರಸಭಾ ಸದಸ್ಯರಾದ ಕೆ.ಜೆ.ಪೀಟರ್, ಗಿಲ್‍ಬರ್ಟ್ ಲೋಬೋ, ಪ್ರಮುಖರಾದ ಸಿ.ಡೀನಾ, ಜಾನ್ಸನ್ ಪಿಂಟೋ, ಕ್ರಿಸ್ಟೋಫರ್ ಮತ್ತಿತರರು ಉಪಸ್ಥಿತರಿದ್ದರು.