ಸೋಮವಾಪೇಟೆ, ಆ. 28: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದು, ಕಾಮಗಾರಿಗಳ ಬಗ್ಗೆ ಚರ್ಚಿಸಬೇಕಾದ ಶಾಸಕರುಗಳು ಹಾಗೂ ಬಿಜೆಪಿ ಜನಪ್ರತಿನಿಧಿಗಳು ಸಭೆಗಳಿಗೆ ಗೈರಾಗುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅಸಹಕಾರ ತೋರುತ್ತಿದ್ದಾರೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿಲ್ಲೆಯ ಶಾಸಕತ್ರಯರು ಕೇವಲ ಪ್ರತಿಭಟನೆಗಳಿಗಷ್ಟೇ ಸೀಮಿತರಾಗಿದ್ದು, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಕೆಡಿಪಿ ಸಭೆಗಳಿಗೆ ಬಿಜೆಪಿಯ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಗೈರಾಗಿರುವದು ಖಂಡನೀಯ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಒಂದೇ ದಿನ ಬಸ್ ನಿಲ್ದಾಣ, ಜಿ.ಪಂ. ಕಚೇರಿ ನಿರ್ಮಾಣ ಸೇರಿದಂತೆ ಒಟ್ಟು 27 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಶಾಸಕರುಗಳಿಗೆ ಆಹ್ವಾನ ನೀಡಿದ್ದರೂ ಗೈರಾಗುವ ಮೂಲಕ ಕ್ಷುಲ್ಲಕ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ಜಿಲ್ಲೆಗೆ ಬರುವ ನೂತನ ಉಸ್ತುವಾರಿ ಸಚಿವರಿಗೆ ಪ್ರಾರಂಭದಲ್ಲಿ ಅಸಹಕಾರ ನೀಡಿ ಅವರ ಉತ್ಸಾಹಕ್ಕೆ ತಣ್ಣೀರೆರೆಚುವ ಕಾರ್ಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವೃಥಾ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕೆ.ಎಂ. ಲೋಕೇಶ್ ದೂರಿದರಲ್ಲದೆ, ಮೊನ್ನೆ ನಡೆದ ಕೆಡಿಪಿ ಸಭೆಗೆ ಶಾಸಕರು ಸೇರಿದಂತೆ ಜಿ.ಪಂ. ಅಧ್ಯಕ್ಷ, ಬಿಜೆಪಿ ಸದಸ್ಯರುಗಳು ಗೈರಾಗಿರುವದು ಖಂಡನೀಯ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳ ಬೇಕಿದ್ದರೂ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಜಿಲ್ಲೆಯ ಆಮೂಲಾಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಭರವಸೆ ನೀಡಿದ್ದಾರೆ. ಆದರೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಸಹಕಾರ ನೀಡದೇ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯವರು ಗೊಂದಲ ಸೃಷ್ಟಿಸಿ, ಕಾಂಗ್ರೆಸ್‍ನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನವರು ಎಂದಿಗೂ ಹಿಂದೂ ವಿರೋಧಿಯಲ್ಲ. ನ್ಯಾಯದ ಪರ ಹೋರಾಟ ಮಾಡುವವರು ಎಂದು ಲೋಕೇಶ್ ಸಮರ್ಥಿಸಿಕೊಂಡರು. ಕಂದಾಯ ಇಲಾಖೆ ವತಿಯಿಂದ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ನೀಡುವ ಕ್ರಾಂತಿ ಕಾರಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಅಗತ್ಯ ದಾಖಲಾತಿಗಳೊಂದಿಗೆ ನೆಮ್ಮದಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಲೋಕೇಶ್ ತಿಳಿಸಿದರು.

ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಪರಿಶಿಷ್ಟ ಜಾತಿ-ಪಂಗಡದ ಬ್ಲಾಕ್ ಅಧ್ಯಕ್ಷ ಟಿ.ಈ. ಸುರೇಶ್, ಬ್ಲಾಕ್ ಕಾರ್ಯದರ್ಶಿ ಹೂವಯ್ಯ, ಕೊಡ್ಲಿಪೇಟೆ ಹೋಬಳಿ ಕಾರ್ಯದರ್ಶಿ ಜನಾರ್ಧನ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಅವರುಗಳು ಉಪಸ್ಥಿತರಿದ್ದರು.