ಸೋಮವಾರಪೇಟೆ,ಆ.6: ಭಾರತೀಯ ಜನತಾ ಪಾರ್ಟಿ ಈ ಹಿಂದಿಗಿಂತಲೂ ಬಲಿಷ್ಠವಾಗಿ ಬೆಳೆದಿದ್ದು, ಕೊಡಗು ಬಿಜೆಪಿಯ ಭದ್ರಕೋಟೆಯಾಗಿದೆ. ಪಕ್ಷದ ಮುಖಂಡರು ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳ ಬಗ್ಗೆ ಯಾರಿಗಾದರೂ ಅಭಿಪ್ರಾಯ ಬೇಧಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಮುಖಂಡರು ಪಕ್ಷದ ಕಿವಿಮಾತು ಹೇಳಿದರು.

ಇಲ್ಲಿಗೆ ಸಮೀಪದ ಬೇಳೂರು ಗ್ರಾಮದ ಸಿಲ್ವರ್ ಓಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ತಾಲೂಕು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಶಾಸಕತ್ರಯರೂ ಸೇರಿದಂತೆ ಪಕ್ಷದ ಮುಂಚೂಣಿ ನಾಯಕರುಗಳು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಕೆಲ ಸಮಯಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಶಾಸಕರುಗಳು ಸಭೆಯಲ್ಲಿ ಈ ಬಗ್ಗೆ ನೇರವಾಗಿ ಎಲ್ಲೂ ಪ್ರಸ್ತಾಪಿಸದೇ ಕಾರ್ಯಕರ್ತರ ಮನಗೆಲ್ಲುವ ಪ್ರಯತ್ನ ಮಾಡಿದರು. ಶಾಸಕರ ವಿರುದ್ಧ ಮುನಿಸಿಕೊಂಡು ಗುಪ್ತ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಯಾವದೇ ಮಾತುಗಳು ಹೊರ ಬರಲಿಲ್ಲ. ಎಲ್ಲರನ್ನೂ ಒಗ್ಗೂಡಿಸಿ ಕೊಂಡು ಹೋಗುವದೇ ಆದ್ಯತೆ ಯಾಗಿದ್ದು, ಕಾರ್ಯಕರ್ತರೇ ಪಕ್ಷದ ಆಸ್ತಿ ಎಂಬಂತಹ ಹುರಿದುಂಬಿಸುವ ಮಾತುಗಳ ಮೂಲಕ ಕಾರ್ಯಕರ್ತರ ಮನಗೆಲ್ಲುವಲ್ಲಿ ಸಫಲರಾದರು.

ಕಳೆದೆರಡು ದಿನಗಳ ಹಿಂದೆಯೂ ನಡೆದ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ಏರ್ಪಟ್ಟು, ಇಂದಿನ ಸಭೆಯಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾಗುವದನ್ನು ಚಾಣಾಕ್ಷತನದಿಂದ ತಪ್ಪಿಸಿರುವ ನಾಯಕರು, ನಿನ್ನೆಯೇ ಕೆಲ ಮುಖಂಡರ ಸಭೆ ನಡೆಸಿ ಪಕ್ಷದ ಬಗ್ಗೆ ಯಾರಲ್ಲೂ ನಕಾರಾತ್ಮಕ ಭಾವನೆ ಬರಬಾರದು. ಆಂತರಿಕ ವಿಚಾರಗಳು ನಮ್ಮನಮ್ಮಲ್ಲೇ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಬೆಲೆಯಿದ್ದು, ಖುದ್ದು ಬಗೆಹರಿಸಿ ಕೊಳ್ಳಬೇಕು ಎಂದು ತಿಳಿಸಿದ್ದರಿಂದ, ಇಂದಿನ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಕಳೆದ ಕೆಲ ಸಮಯಗಳಿಂದ ಅಲ್ಲಲ್ಲೇ ಗುಪ್ತ ಸಭೆಗಳನ್ನು ಮಾಡಿ ಶಾಸಕರ ವಿರೋಧಿ ನಿಲುವನ್ನು ತಳೆದಿರುವ ನಾಯಕರು ಗಳನ್ನು ಒಗ್ಗೂಡಿಸುವ ಒಂದು ವರ್ಗದ ಪ್ರಯತ್ನವನ್ನು ಅತೀ ಜಾಗರೂಕತೆ ಯಿಂದಲೇ ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಪಕ್ಷದ ಮುಖಂಡರು, ಇಂದಿನ ಸಭೆಯಲ್ಲಿ ಯಾರೂ ಭಿನ್ನರಾಗ ಹಾಡದಂತೆ ತಡೆಹಿಡಿಯುವಲ್ಲಿ ಸಫಲರಾದರು. ಅಭಿಪ್ರಾಯ ಬೇಧ ಹೊಂದಿರುವ ಕೆಲ ಮುಖಂಡರನ್ನು ವೇದಿಕೆಯಲ್ಲೇ ಕುಳ್ಳಿರಿಸುವ ಮೂಲಕ ಅವರುಗಳು ಬಾಯಿ ಮುಚ್ಚುವಂತೆ ಮಾಡಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು, ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿಯಾಯಿತು. ಶಾಸಕರು ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಅತೃಪ್ತಗೊಂಡಿದ್ದ ಕೆಲ ಮುಖಂಡರು ಇಂದು ಶಾಸಕರುಗಳ ಸಮ್ಮುಖದಲ್ಲೇ ವೇದಿಕೆಯಲ್ಲಿದ್ದುದನ್ನು ಕಂಡು ಕೆಲ ಕಾರ್ಯಕರ್ತರು ಕಸಿವಿಸಿಗೊಂಡರು.

ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಅಧಿಕಾರ ಇದ್ದಾಗ ಅವರನ್ನು ವಿರೋಧಿಸುವವರೂ ಅಧಿಕ ಮಂದಿ ಇರುತ್ತಾರೆ. ದೂಷಣೆ ಆರೋಪಗಳು ಸಹಜ. ತಾನು ಸ್ಪೀಕರ್ ಆಗಿದ್ದಾಗಲೂ ಇಂತಹ ಸನ್ನಿವೇಶ ಎದುರಾಗಿತ್ತು. ಇಂತಹ ವಿಚಾರಗಳನ್ನು ದೊಡ್ಡದು ಮಾಡದೇ ನೇರವಾಗಿ ಮಾತುಕತೆ ನಡೆಸಿ ಆತಂಕಗಳನ್ನು ನಿವಾರಿಸಿಕೊಳ್ಳಬೇಕು ಎಂದರು. ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ವಾಗಬೇಕು. ಮೋದಿ ಅವರ ಕಾಂಗ್ರೆಸ್ ಮುಕ್ತ ದೇಶಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಕೊಡಗನ್ನು ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಬೇಕು. ಪಕ್ಷದ ಸಂಘಟನೆ ಹಾಗೂ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದಿರ ಬೇಕು ಎಂದರು. ಮೋದಿ ಅವರು ಪ್ರಪಂಚದಲ್ಲೇ ಭಾರತಕ್ಕೆ ವಿಶಿಷ್ಟ ಸ್ಥಾನಮಾನ ದೊರಕಿಸಲು, ಆಮೂಲಾಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂದರ್ಭ ದಲ್ಲಿ ಸ್ಥಳೀಯವಾಗಿ ನಾವುಗಳೂ ಸಹ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮೋದಿ ಅವರಿಗೆ ಸಹಕಾರಿಯಾಗಿ ನಿಲ್ಲಬೇಕು ಎಂದರು.

ಶಾಸಕ ರಂಜನ್ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ನಿಂತ ನೀರಾಗಿದೆ. ಅಧಿಕಾರಿಗಳಿಗೂ ರಕ್ಷಣೆಯಿಲ್ಲದಂತಾಗಿದೆ. ಸರ್ಕಾರಿ ನೌಕರರಿಗೂ ವೇತನ ಸರಿಯಾಗಿ ಆಗುತ್ತಿಲ್ಲ. ಅಭಿವೃದ್ಧಿಗೆ ಅನುದಾನ ವಂತೂ ಲಭಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಜಿಲ್ಲೆಯ ಕಾರ್ಯಕರ್ತರ ಒಗ್ಗಟ್ಟಿನಿಂದ ಎರಡೂ ಕ್ಷೇತ್ರ ಬಿಜೆಪಿ ವಶವಾಗಲಿದೆ. ನಂತರ ಜಿಲ್ಲೆ ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

ಸಭೆಗೆ ಕೊಂಚ ತಡವಾಗಿ ಆಗಮಿಸಿದ ಪಕ್ಷದ ಜಿಲ್ಲಾಧ್ಯಕ್ಷ ಮನುಮುತ್ತಪ್ಪ ಮಾತನಾಡಿ, ಒಗ್ಗಟ್ಟಿನ ಮಂತ್ರವನ್ನು ಪುನರುಚ್ಛರಿಸಿದರು. ಸಭೆಯ ಅಧ್ಯಕ್ಷತೆಯನ್ನು ನಿರ್ಗಮಿತ ಅಧ್ಯಕ್ಷ ಪಟ್ಟೆಮನೆ ಶೇಷಪ್ಪ ವಹಿಸಿದ್ದರು. ಇದೇ ಸಂದರ್ಭ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಎಂ.ಎನ್. ಕೊಮಾರಪ್ಪ ಅವರು ಪಕ್ಷದ ಬಾವುಟವನ್ನು ಸ್ವೀಕರಿಸುವ ಮೂಲಕ ಅಧಿಕಾರ ಜವಾಬ್ದಾರಿ ವಹಿಸಿ ಕೊಂಡರು. ಉಳಿದಂತೆ ಬೇರೆ ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಬಗ್ಗೆ ಯಾವದೇ ಚರ್ಚೆಗಳು ನಡೆಯಲಿಲ್ಲ. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಪ್ರಮುಖರುಗಳಾದ ಬಿ.ಡಿ. ಮಂಜುನಾಥ್, ಜಿ.ಎಲ್. ನಾಗರಾಜ್, ಭಾರತೀಶ್, ಕುಶಾಲಪ್ಪ, ವಿ.ಕೆ. ಲೋಕೇಶ್, ಶುಂಠಿ ಸುರೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಎಂ.ಬಿ. ಜಯಂತ್, ತಾಕೇರಿ ಪೊನ್ನಪ್ಪ, ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 600ಕ್ಕೂ ಅಧಿಕ ಮಂದಿ ಕಾರ್ಯಕರ್ತರು, ಮುಖಂಡರುಗಳು ಭಾಗವಹಿಸಿದ್ದರು. ನಗರ ಬಿಜೆಪಿ ಅಧ್ಯಕ್ಷ ಸೋಮೇಶ್ ಸ್ವಾಗತಿಸಿ, ಕೆ.ಜಿ. ಸುರೇಶ್ ನಿರೂಪಿಸಿ, ಮನುಕುಮಾರ್ ರೈ ವಂದಿಸಿದರು. - ವಿಜಯ್ ಹಾನಗಲ್