ಮಡಿಕೇರಿ, ನ. 3: ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ, ಅಕ್ಟೋಬರ್ 17 ರಿಂದ 31 ರವರೆಗೆ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ “ಸ್ವಚ್ಛ ಭಾರತ ಅಭಿಯಾನ” ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.ಸಂಸ್ಥೆಯ ಪ್ರಧಾನ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ಎಲ್ಲಾ ವಿಜ್ಞಾನಿಗಳು ಹಾಗೂ ಸಹಾಯಕ ವೃಂದದವರೊಂದಿಗೆ “ಸ್ವಚ್ಛತಾ ಶಪಥ”ವನ್ನು ಸ್ವೀಕರಿಸಿ, ಸ್ವಚ್ಛತೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಇದರ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಹೇಳಿದರು. ನಂತರ ಎಲ್ಲರೂ ಸೇರಿ ಸಂಸ್ಥೆಯ ಸುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ಸಂಸ್ಥೆಯ ಎಲ್ಲಾ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ನೌಕರರು ಪ್ರತಿದಿನ ಒಂದು ಗಂಟೆಗಳ ಕಾಲ ಶುಚಿತ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ದಿನಗಳಲ್ಲಿ ಕಚೇರಿಯ ಕಟ್ಟಡಗಳು, ಪ್ರಯೋಗಾಲಯಗಳು, ಸಂಗ್ರಹ ಕೊಠಡಿಗಳು ಹಾಗೂ ಸಂಸ್ಥೆಯ ವಸತಿ ಗೃಹದ ಆವರಣಗಳನ್ನು ಸ್ವಚ್ಛ ಮಾಡಲಾಯಿತು. ಹಾಗೂ ಎಲ್ಲಾ ನೌಕರರು ಒಟ್ಟಾಗಿ ಸಂಸ್ಥೆಯ ಪ್ರಾಯೋಗಿಕ ಕ್ಷೇತ್ರಗಳನ್ನು ಸ್ವಚ್ಛಗೊಳಿಸಿ, ಅಲ್ಲಿನ ತರಗೆಲೆಗಳು ಹಾಗೂ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಎರೆಹುಳು ಗೊಬ್ಬರದ ಘಟಕಕ್ಕೆ ಹಾಕಲಾಯಿತು. ಧನಾತ್ಮಕ ಹಾಗೂ ಆರೋಗ್ಯಕರ ಚಿಂತನೆ ಮೂಡಿಸುವ ಸಲುವಾಗಿ, ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳನ್ನೊಳಗೊಂಡ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

“ಸ್ವಚ್ಛತಾ ಕಾರ್ಯಕ್ರಮ ಅಂಗವಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬೆಟ್ಟಗೇರಿಯಲ್ಲಿ ಸ್ವಚ್ಛತೆಂiÀi ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತೆ ಕಾಪಾಡುವದು, ಪ್ರಾಥಮಿಕ ಆರೋಗ್ಯ ಹಾಗೂ ಜೀವ ವೈವಿಧ್ಯತೆಯ ಸಂರಕ್ಷಣೆಯ ಅರಿವು ಮೂಡಿಸುವ ಗುರಿ ಹೊಂದಿದ್ದು, ಈ ಕಾರ್ಯಕ್ರಮದಲ್ಲಿ ಶಾಲೆಯ ಸುಮಾರು ನೂರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ವಿವಿಧ ವೀಡಿಯೋ ಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. “ಸ್ವಚ್ಛ ಭಾರತ” ವಿಷಯದ ಮೇಲೆ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು ಇದರೊಂದಿಗೆ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯದ್ವಾರದಿಂದ ಹೆದ್ದಾರಿ ಮಾರ್ಗದ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎರಡು ವಾರಗಳು ನಡೆದ ಈ “ಸ್ವಚ್ಛ ಭಾರತ” ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಜ್ಞಾನಿಗಳು ಹಾಗೂ ಇತರ ನೌಕರ ವರ್ಗದವರು ಹುಮ್ಮಸ್ಸಿನಿಂದ ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ನೆರವಾದರು.