ಶನಿವಾರಸಂತೆ, ಜು. 23: ಪಟ್ಟಣದ 3ನೇ ವಿಭಾಗದಲ್ಲಿ ಮುಖ್ಯರಸ್ತೆಯಿಂದ ಬಿದರೂರು ರಸ್ತೆಗೆ ತೆರಳುವ ಕಾಲುದಾರಿ ಅಪಾಯದ ಅಂಚಿನಲ್ಲಿದೆ. ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ.

ಶೀಘ್ರ ದುರಸ್ತಿ ಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಆಗ್ರಹಿಸಿ, ಹೇಳಿಕೆ ನೀಡಿದ್ದಾರೆ.

ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಕಾಲುದಾರಿಯ ಕೆಳಭಾಗದ ಮಣ್ಣು ಕುಸಿಯುತ್ತಿದೆ. ಮೇಲ್ಭಾಗದ ಮೆಟ್ಟಲುಗಳ ಕಾಂಕ್ರಿಟ್ ಮಾತ್ರ ಉಳಿದಿದೆ. ದಿನನಿತ್ಯ ಈ ಕಾಲುದಾರಿಗಾಗಿ ಸಾರ್ವಜನಿಕರು, ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದ ಭೀತಿಯಿಂದಲೇ ಸಂಚರಿಸುತ್ತಿದ್ದಾರೆ ಎಂದು ಸಾರ್ವಜನಿಕರಾದ ಬಿ.ಕೆ. ಚಂದ್ರಶೇಖರ್, ಆದಿಲ್ ಪಾಷಾ, ರಂಜನ್, ನಾರಾಯಣ್, ಮಹೇಶ್, ಗಣಪತಿ, ಗೋಪಾಲ್, ರೇಣುಕಾ, ಜಯಮ್ಮ, ಲಲಿತಾ, ರುಕ್ಮಿಣಿ ದೂರಿದ್ದಾರೆ.

ಈ ದಾರಿಗಾಗಿ ಕಾವೇರಿ ಕಾಲೇಜಿಗೆ ತೆರಳುವ 143 ವಿದ್ಯಾರ್ಥಿಗಳು ಹಾಗೂ ಪ್ರಾಂಶುಪಾಲ ಎಚ್.ಎನ್. ದೇವರಾಜ್ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಕಾಲುದಾರಿ ದುರಸ್ತಿಗಾಗಿ ಈಗಾಗಲೇ ಗ್ರಾ.ಪಂ., ತಾ.ಪಂ. ಸದಸ್ಯರಿಗೆ, ಕಂದಾಯ ಇಲಾಖೆ, ತಹಶೀಲ್ದಾರ್, ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದು, ಶೀಘ್ರ ದುರಸ್ತಿಗೆ ಒತ್ತಾಯಿಸಿದ್ದಾರೆ.