ವೀರಾಜಪೇಟೆ, ಜು. 7: ವೀರಾಜಪೇಟೆಯ ಮುಖ್ಯ ರಸ್ತೆಯಿಂದ ಲಿಂಗಯ್ಯನ ಓಣಿ ಮಾರ್ಗವಾಗಿ ಗಾಂಧಿನಗರಕ್ಕೆ ತೆರಳುವ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಪಕ್ಕದ ರಸ್ತೆಯಲ್ಲಿ ಎರಡು ದುರ್ಬಲ ಗೊಂಡಿರುವ ವಿದ್ಯುತ್ ಕಂಬಗಳು ನೆಲ ಕಚ್ಚುವ ಸ್ಥಿತಿಯಲ್ಲಿದ್ದು, ಅಪಾಯದ ಅಂಚಿನಲ್ಲಿರುವದಾಗಿ ಗಾಂಧಿನಗರದ ಸರ್ವಜನಾಂಗ ಸಂಘಟನೆಯ ಅಧ್ಯಕ್ಷ ಪಿ.ಎ. ಮಂಜುನಾಥ್ ಆರೋಪಿಸಿದ್ದಾರೆ.

ಗಾಂಧಿನಗರ ವಿಭಾಗದಲ್ಲಿ ಭಾರೀ ಮಳೆ-ಗಾಳಿಗೆ ಅಪಾಯದ ಅಂಚಿನಲ್ಲಿರುವ ಎರಡು ಕಂಬಗಳು ನೆಲಕ್ಕೆ ಉರುಳುವ ಸಂಭವವಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಪ್ರಾಣ ಹಾನಿಯಾಗುವ ಸಂಭವವಿದೆ. ಇದಕ್ಕೆ ಸಂಬಂಧಿಸಿದಂತೆ ಇಲ್ಲಿನ ಚೆಸ್ಕಾಂ ಅಧಿಕಾರಿಗಳಿಗೆ ಎರಡು ಬಾರಿ ದೂರು ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ದುರಂತದ ನಂತರ ಇದನ್ನು ಸರಿಪಡಿಸುವ ಯೋಚನೆಯಲ್ಲಿದ್ದಾರೆ ಎಂದು ಮಂಜುನಾಥ್ ಮಾಧ್ಯಮ ದವರೊಂದಿಗೆ ದೂರಿದ್ದಾರೆ.

ವೀರಾಜಪೇಟೆ ವಿಭಾಗದಲ್ಲಿ ಚೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪÀಂದಿಸುತ್ತಿಲ್ಲ ಮಳೆಗಾಲದ ಮೊದಲೇ ಚೆಸ್ಕಾಂ, ಮುನ್ನೆಚ್ಚರಿಕೆಯ ಕ್ರಮವಾಗಿ ವಿದ್ಯುತ್ ಕಂಬವನ್ನು ಬದಲಿಸಬೇಕಿತ್ತು ಎಂದು ಸಂಘಟನೆಯ ಮಾಳೇಟಿರ ಕಾಶಿ ಕುಂಞಪ್ಪ ಚೆಸ್ಕಾಂ ವಿರುದ್ಧ ದೂರಿದರು. ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು 7 ದಿನಗಳೊಳಗೆ ಇಲಾಖೆ ಬದಲಿಸದಿದ್ದರೆ ಗಾಂಧಿನಗರದ ನಿವಾಸಿಗಳ ಸಹಕಾರದೊಂದಿಗೆ ಸೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ಸಂಘಟನೆಯ ಸಲಹೆಗಾರ ಪಿ.ಎ. ಮೋಹನ್‍ದಾಸ್ ತಿಳಿಸಿದ್ದಾರೆ.