ಸೋಮವಾರಪೇಟೆ, ಸೆ. 9: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಅಪರಿಚಿತ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಇವರ ಗುರುತು ಪತ್ತೆ ಇದ್ದವರು, ವಾರಸುದಾರರು ಸೋಮವಾರಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಮನವಿ ಮಾಡಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಹೊಟ್ಟೆ ನೋವು ಎಂದು ಹೇಳಿಕೊಂಡು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ವ್ಯಕ್ತಿ, ತನ್ನ ಹೆಸರು ಲೋಕೇಶ್, ಪ್ರಾಯ 45 ವರ್ಷ ಎಂದು ದಾಖಲಾತಿಯಲ್ಲಿ ನಮೂದಿಸಿದ್ದಾರೆ. ಇವರನ್ನು ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವದರಿಂದ, ಮೃತ ದೇಹವನ್ನು ಇಲ್ಲಿನ ಶವಾಗಾರದಲ್ಲಿ ಇಡಲಾಗಿದೆ. ಮೃತರ ವಾರದುದಾರರಿದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ (ದೂ: 08276 282040)ಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.