ಬೆಂಗಳೂರು, ಜು. 13: ನನ್ನ ರಾಜಕೀಯ ಜೀವನ ಕೊಡಗಿನಿಂದ ಆರಂಭವಾಗಿದೆ. ಗುಂಡೂರಾವ್ ನನ್ನ ಗುರುಗಳು. ಕೊಡಗಿನ ಬಗ್ಗೆ ಹೆಮ್ಮೆಯಿದೆ. ಗಣಪತಿ ಅವರ ಸಾವು ನನಗೂ ನೋವು ತಂದಿದೆ. ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವದೇ ತಪ್ಪು ಮಾಡಿಲ್ಲ. ಅಪರಾಧಿ ನಾನಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಸದನದಲ್ಲಿಂದು ಮಾತನಾಡಿದ ಅವರು, ಕೇವಲ ಒಂದು ಬಾರಿ ಮಾತ್ರ ಗಣಪತಿ ಅವರನ್ನು ನೋಡಿದ್ದೇನೆ. 2008ರಲ್ಲಿ ರಾಜಗೋಪಾಲಪುರಕ್ಕೆ ಅವರು ವರ್ಗಾವಣೆ ಬಯಸಿದ್ದ ಸಂದರ್ಭ ಮಾಡಿಕೊಟ್ಟಿದ್ದೇನೆ. ನಂತರ ಯಶವಂತಪುರದಲ್ಲಿದ್ದಾಗ ಅವರು ಅಮಾನತ್ತುಗೊಂಡಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ನನ್ನ ಬಳಿಗೆ ಬಂದಿದ್ದರು. ಆಗಮಾತ್ರ ನೋಡಿದ್ದು, ನಂತರ ಅವರೊಂದಿಗೆ ಯಾವದೇ ಸಂಪರ್ಕ ಮಾಡಿಲ್ಲವೆಂದು ಹೇಳಿದರು. ಅಧಿಕಾರ ಶಾಶ್ವತ ಅಲ್ಲ. ಅದಕ್ಕೆ ಅಂಟಿಕೊಂಡು ಕೂರುವದೂ ಇಲ್ಲ. ಭ್ರಷ್ಟರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುತ್ತೇನೆ. ನನ್ನದು ತಪ್ಪಿದ್ದರೆ ಶಿಕ್ಷೆಗೆ ಸಿದ್ಧನಿದ್ದೇನೆ. ಆದರೆ ಸದನದಲ್ಲಿಯೇ ಶಿಕ್ಷೆಯಾಗಬೇಕೆಂದು ಹೇಳುವದು ಸರಿಯಲ್ಲ. ಇದು ತಪ್ಪು ಸಂಪ್ರದಾಯ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ರೀತಿಯಾಗಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದರೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಹೇಳಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಗಣಪತಿ ಅವರ ಮನೆಯವರು ಏನೇ ಹೇಳಿಕೆ ನೀಡಿದರೂ ನನಗೆ ಬೇಜಾರಿಲ್ಲ. ನಾನು ಗಣಪತಿ ಅವರಿಗೆ ಯಾವದೇ ಕಿರುಕುಳ ನೀಡಿಲ್ಲ ಎಂದು ಗಣಪತಿ ಅವರ ಪತ್ನಿ ಪಾವನರಿಗೆ ಹೇಳಬಯಸುತ್ತೇನೆ. ಈ ಬಗ್ಗೆ ತನಿಖೆಯಾಗಲಿ, ತಪ್ಪಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದರು.