ಸೋಮವಾರಪೇಟೆ, ಆ. 31: ಇಲ್ಲಿನ ಮಲಂಗ್ ಷಾವಲಿ ಯೂತ್ ಕಮಿಟಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಪರಿಶಿಷ್ಟ ಜಾತಿ ವರ್ಗಗಳ ಸಂಘಟನಾ ಸಮಿತಿ ಅಧ್ಯಕ್ಷ ಎಂ.ಪಿ. ಹೊನ್ನಪ್ಪ ಸೇರಿದಂತೆ ಇತರರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ತಿಳಿಸಿದ್ದಾರೆ.
ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ಅವರು ಅನಾಥಾಶ್ರಮದ ಹೆಸರಿನಲ್ಲಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುತ್ತಿದ್ದಾರೆ. ಖಾಸಗಿ ಬಸ್ ಮಾಲೀಕರಿಂದ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಎಂ.ಪಿ. ಹೊನ್ನಪ್ಪ ಅವರು ಆಧಾರ ರಹಿತ ಆರೋಪ ಮಾಡಿದ್ದಾರೆ. ವಾಸ್ತವದಲ್ಲಿ ಮಲಂಗ್ ಷಾವಲಿ ಅಥವಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಯಾವದೇ ಅನಾಥಾಶ್ರಮ ಸೋಮವಾರ ಪೇಟೆಯಲ್ಲಿ ಇಲ್ಲ. ಆದರೂ ಉದ್ದೇಶಪೂರ್ವಕವಾಗಿ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಅಜೀಜ್ ಆರೋಪಿಸಿದ್ದಾರೆ.
ತಾನು ಅನಾಥಾಶ್ರಮದ ಹೆಸರಿನಲ್ಲಿ ಹಣ ಸಂಗ್ರಹಿಸಿಲ್ಲ. ಖಾಸಗಿ ಬಸ್ ಮಾಲೀಕರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ. ಈ ಬಗ್ಗೆ ದಾಖಲೆಗಳಿದ್ದರೆ ಹೊನ್ನಪ್ಪ ಅವರು ಬಿಡುಗಡೆಗೊಳಿಸಲಿ. ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಹೊನ್ನಪ್ಪ ಅವರು ಹವಣಿಸುತ್ತಿದ್ದಾರೆ ಎಂದು ಅಬ್ದುಲ್ ಅಜೀಜ್ ದೂರಿದ್ದಾರೆ.
ಹೊನ್ನಪ್ಪ ಸೇರಿದಂತೆ ಯತೀಶ್, ರಾಜಪ್ಪ ಅವರುಗಳ ವಿರುದ್ಧ ಈಗಾಗಲೇ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವದು ಎಂದು ಎಚ್ಚರಿಸಿದ್ದಾರೆ.