*ಗೋಣಿಕೊಪ್ಪ, ಸೆ. 7: ಕಾರು ಮತ್ತು ಆಟೋ ನಡುವಿನ ಅಪಘಾತದಲ್ಲಿ 4 ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ನಡೆದಿದೆ.ಕೈಕೇರಿ ಭಗವತಿ ದೇವಸ್ಥಾನದ ಸಮೀಪದಲ್ಲಿ ಗೋಣಿಕೊಪ್ಪಕ್ಕೆ ಆಗಮಿಸುತ್ತಿದ್ದ ಆಟೋ ಹಾಗೂ ವೀರಾಜಪೇಟೆ ಮಾರ್ಗದಿಂದ ತೆರಳುತ್ತಿದ್ದ ಕೇರಳದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಆಟೋದಲ್ಲಿದ್ದ 4 ವರ್ಷದ ಐಶ್ವರ್ಯ ಮೃತಪಟ್ಟರೆ, ತಾಯಿ ಶ್ರುತಿ ಮತ್ತು ಅಜ್ಜಿಗೆ ಗಂಭೀರ ಗಾಯಗಳಾಗಿವೆ.ಕಾರು ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ರಸ್ತೆಯಲ್ಲಿ ಬಿದ್ದಿದ್ದು ಆಟೋ ಮೂವರ ಮೇಲೆ ಮಗುಚಿಕೊಂಡಿದೆ. ಐಶ್ವರ್ಯಳ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ತಲೆಯ ಭಾಗ ರಸ್ತೆಗೆ ಬಡಿದುದರಿಂದ ಐಶ್ವರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಹಾಗೂ ಅಜ್ಜಿಯನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ.

(ಮೊದಲ ಪುಟದಿಂದ) ತಾಯಿಯ ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಅಜ್ಜಿಯ ತಲೆಯ ಭಾಗಕ್ಕೆ ಗಾಯಗಳಾಗಿದೆ.

ಮಾನವೀಯತೆ ಮೆರೆದ ವಿದ್ಯಾರ್ಥಿ

ಅಪಘಾತ ನಡೆದ ಸಂದರ್ಭ ಅಪಘಾತವನ್ನು ವೀಕ್ಷಿಸುತ್ತ ಸಾರ್ವಜನಿಕರು ಸ್ಥಬ್ಧವಾಗಿ ನಿಂತಿದ್ದರೆ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಣ್ಣಪ್ಪ ಅಪಘಾತಕ್ಕೆ ಒಳಪಟ್ಟ ಐಶ್ವರ್ಯಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿ ಮಾನವೀಯತೆ ಮೆರೆದ.

ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದ ಶ್ರುತಿ ಕಳೆದ ವರ್ಷವಷ್ಟೆ ತನ್ನ ಪತಿಯನ್ನು ಕಳೆದುಕೊಂಡು 2 ವರ್ಷದ ಹಿಂದೆ ತನ್ನ ಅತ್ತೆ ಮೃತಪಟ್ಟ ವ್ಯಥೆಯಲ್ಲಿದ್ದು, ಇದೀಗ ತನ್ನ ಮಗುವನ್ನು ಕೂಡ ಕಳೆದುಕೊಂಡಂತಾಗಿದೆ. ಮಗು ಅಗಲಿದ ವಿಚಾರ ತಿಳಿದ ಶ್ರುತಿ ಕೆಲ ಸಮಯ ಪ್ರಜ್ಞಾಹೀನರಾಗಿದ್ದರು.

ಕೇರಳದ ವಾಹನಗಳು ಅತೀ ವೇಗವಾಗಿ ಸಂಚರಿಸುವದರಿಂದ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಇದೇ ಸ್ಥಳದಲ್ಲಿ ಕಳೆದ 2-3 ದಿನಗಳಿಂದ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಲೇ ಇದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಆಟೋ ಚಾಲಕರ ಸಂಘ, ಬಸ್ ಚಾಲಕರ ಸಂಘ, ವಾಹನ ಚಾಲಕರ ಸಂಘ, ಸಾರ್ವಜನಿಕರು ಮೃತಪಟ್ಟ ಐಶ್ವರ್ಯಳ ಕುಟುಂಬಕ್ಕೆ 35 ಸಾವಿರ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದಾರೆ ಎಂದು ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಜಪ್ಪು ತಿಳಿಸಿದ್ದಾರೆ.

-ಚಿತ್ರ ವರದಿ-ದಿನೇಶ್ ಎನ್.ಎನ್