ಕೂಡಿಗೆ, ಅ. 21: ಹುಣಸೂರು-ಪಿರಿಯಾಪಟ್ಟಣ ಮುಖ್ಯ ರಸ್ತೆಯ ಚಿಲ್ಕುಂದದ ತಂಬಾಕು ಹರಾಜು ಮಾರುಕಟ್ಟೆ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಡಿಕೇರಿ ಸಾರಿಗೆ ಸಂಸ್ಥೆಯ ಡಿಪೋದ ಚಾಲಕ ಕಂ ನಿರ್ವಾ ಹಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಮೀಪದ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿದ್ದಲಿಂಗಪುರದ ನಿವಾಸಿ ಗೋವಿಂದಪ್ಪ ಎಂಬವರ ಮಗ ಪ್ರವೀಣ್‍ಕುಮಾರ್ (30) ಮೃತ ವ್ಯಕ್ತಿ.
ಪ್ರವೀಣ್‍ಕುಮಾರ್ ಹಾಗೂ ಡಿಪೋದ ಸಿಬ್ಬಂದಿಗಳು ಮೈಸೂರಿನಿಂದ ಮಡಿಕೇರಿ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಎದುರಿನಿಂದ ಬರುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದ್ದು, ಕಾರು ಚಾಲನೆ ಮಾಡುತ್ತಿದ್ದ ಪ್ರವೀಣ್‍ಕುಮಾರ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಸಿಬ್ಬಂದಿಗಳಾದ ಹೆಬ್ಬಾಲೆ ಗ್ರಾಮದ ಹರೀಶ್ ಮತ್ತು ಇನ್ನಿಬ್ಬರು ತೀವ್ರಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತದೇಹವನ್ನು ಹುಣಸೂರು ಶವಾಗಾರದಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದ್ದು, ಸಿದ್ದಲಿಂಗಪುರದಲ್ಲಿ ಶವಸಂಸ್ಕಾರ ನಡೆಯಿತು. ಮೃತ ಪ್ರವೀಣ್‍ಕುಮಾರ್‍ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಸಿದ್ದಲಿಂಗಪುರದ ಉದ್ಯಮಿ ನಾಪಂಡ ಮುತ್ತಪ್ಪ, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್ ಸೇರಿದಂತೆ ಇತರರು ಶವಸಂಸ್ಕಾರದ ಸಂದರ್ಭ ಇದ್ದರು.