ಸೋಮವಾರಪೇಟೆ, ಜ. 19: ತಾಲೂಕು ಪಂಚಾಯಿತಿ ಸದಸ್ಯರುಗಳ ನಡುವಿನ ಜಗಳ ತಾರಕಕ್ಕೇರಿ ತಾಲೂಕು ಮಟ್ಟದ ಅಧಿಕಾರಿಗಳು, ತಾ.ಪಂ. ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಎದುರು ‘ಗೌರವಾನ್ವಿತ’ ತಾಲೂಕು ಪಂಚಾಯಿತಿ ಸದಸ್ಯರುಗಳು ಮಾತಿನಲ್ಲಿ ಹಿಡಿತ ಕಳೆದುಕೊಂಡು ಗರಿ ಗರಿ ಬಟ್ಟೆ ಹಾಕಿದ್ದರೂ ಬೆತ್ತಲಾದಂತೆ ಕಂಡುಬಂದ ತೀರಾ ಅಪರೂಪದ ಘಟನೆ ತಾ.ಪಂ. ಸಭಾಂಗಣದಲ್ಲಿಂದು ನಡೆಯಿತು.

ತಾ.ಪಂ. ಸದಸ್ಯರೋರ್ವರು ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ತೊಡಗಿದ್ದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯ ಭರಾಟೆಯಲ್ಲಿ ದರೋಡೆಕೋರ ಎಂಬ ಪದ ಬಳಕೆಯಾಯಿತು. ಇದರ ಮುಂದುವರೆದ ಭಾಗವಾಗಿ ಅತ್ತಲಿಂದ ‘ನಿನ್ನ ಅಪ್ಪ, ಅಮ್ಮ, ಹೆಂಡತಿ..’ ಎಂಬೆಲ್ಲಾ ಪದಗಳು ಉದುರಿದ್ದರಿಂದ ಕೆರಳಿದ ಮಹಿಳಾಸದಸ್ಯರಾದಿಯಾಗಿ ಪುರುಷ ಸದಸ್ಯರು ಕಾಂಗ್ರೆಸ್ ಸದಸ್ಯನ ಮೇಲೆ ಮುಗಿಬಿದ್ದ ಘಟನೆಗೆ ಎಲ್ಲರೂ ಸಾಕ್ಷಿಯಾಗಬೇಕಾಯಿತು.

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಪ್ರಾರಂಭವಾಗುತ್ತಿ ದ್ದಂತೆಯೇ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ನೋಟ್ ಬ್ಯಾನ್ ಆದ ನಂತರ ತಾ.ಪಂ. ಸದಸ್ಯರೋರ್ವರು ಸುಂಟಿಕೊಪ್ಪ ಸಮೀಪದ ರೆಸಾರ್ಟ್ ಒಂದರಲ್ಲಿ 35ಲಕ್ಷ ಕಪ್ಪು ಹಣ ಸಹಿತ ಪೊಲೀಸರಿಗೆ

(ಮೊದಲ ಪುಟದಿಂದ) ಸಿಕ್ಕಿ ಬಿದ್ದಿದ್ದಾರೆ. ಇಂತಹ ಪ್ರಕರಣದಿಂದ ತಾ.ಪಂ.ಗೆ ಹಾಗೂ ಇತರೆ ಸದಸ್ಯರುಗಳಿಗೆ ಅವಮಾನವಾಗಿದೆ. ಆದ್ದರಿಂದ ಅಂತಹ ಸದಸ್ಯರನ್ನು ಸಭೆಯಲ್ಲಿರಿಸಿಕೊಂಡು ಸಭೆ ನಡೆಸುವದು ಸರಿಯಲ್ಲ ಎಂದರು.

ಮಣಿ ಉತ್ತಪ್ಪ ಅವರು ಯಾವದೇ ಸದಸ್ಯರ ಹೆಸರನ್ನು ಉಚ್ಛರಿಸದಿದ್ದರೂ ಸಹ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಅನಂತಕುಮಾರ್, ‘ಅಂದು ನಡೆದ ಘಟನೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗೆ ವಿವರಣೆ ನೀಡಿದ್ದೇನೆ. ಅಲ್ಲದೆ ತಾ.ಪಂ. ಸಭೆಯಲ್ಲಿ ವಿಚಾರ ತಿಳಿಸಲು ಅವಕಾಶ ನೀಡಬೇಕೆಂದು ತಾ.ಪಂ. ವ್ಯವಸ್ಥಾಪಕರಿಗೆ ಪತ್ರ ನೀಡಿದ್ದೇನೆ. ನಾನು ಕೋಟ್ಯಾಧೀಶ್ವರ; ಸಾಕಷ್ಟು ಜಮೀನಿದೆ. ನನಗೆ ಆದಾಯವಿದೆ, ಅಂದು ಸಿಕ್ಕಿದ ಹಣ ಕಾನೂನು ಬದ್ದವಾಗಿ ಸಂಪಾದಿಸಿದ್ದು, ಆದ್ದರಿಂದ ನನ್ನ ಮೇಲೆ ಮೊಕದ್ದಮೆ ದಾಖಲಾಗಿಲ್ಲ. ಹೆಚ್ಚಿನ ವಿವರ ಬೇಕಿದ್ದರೆ ಸಂಬಂಧಿಸಿದ ಇಲಾಖೆಯನ್ನು ಕೇಳಿ ಪಡೆಯಿರಿ’ ಎಂದು ತಿರುಗೇಟು ನೀಡಿದರು.

ಇದರಿಂದ ಕೆರಳಿದ ಸದಸ್ಯ ಮಣಿ ಉತ್ತಪ್ಪ ‘ನೀವು ಕಾನೂನು ಬದ್ದವಾಗಿ ಸಂಪಾದಿಸಿದ್ದರೆ ಪೊಲೀಸರೇಕೆ ಧಾಳಿ ನಡೆಸುತ್ತಿದ್ದರು? ನಿಮ್ಮೊಂದಿಗೆ ಕೇರಳದ ವ್ಯಕ್ತಿಗಳು ಏಕಿದ್ದರು? ನೀವು ಆಡಳಿತಾರೂಢ ಕಾಂಗ್ರೆಸ್ ಪಕ್ಷದವರಾಗಿದ್ದು, ಪ್ರಭಾವ ಬಳಸಿ ಕೇಸ್ ಹಾಕದಂತೆ ನೋಡಿಕೊಂಡಿರ ಬಹುದು’ ಎಂದು ಗಂಭೀರ ಆರೋಪ ಮಾಡಿದರು.

ಈ ಸಂದರ್ಭ ಕಾಂಗ್ರೆಸ್‍ನ ಸತೀಶ್, ಅನಂತ್ ಕುಮಾರ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಧ್ಯೆ ಪ್ರವೇಶಿಸಿ ಅನಂತಕುಮಾರ್ ಕುರಿತು ‘ಸಭೆಗೆ ಸಮರ್ಪಕವಾದ ಸ್ಪಷ್ಟನೆ ನೀಡಿ, ಇಲ್ಲಸಲ್ಲದ ಸಬೂಬು ನೀಡಿ ಗೊಂದಲ ಸೃಷ್ಟಿಸಬೇಡಿ; ನೀವು ಕೋಟ್ಯಾಧಿಪತಿಗಳಿರಬಹುದು, ಆಸ್ತಿ ಇರಬಹುದು ಆದರೆ ನಿಮ್ಮ ಬಳಿ ಇದ್ದ ಹಣಕ್ಕೆ ನೀವು ತೆರಿಗೆ ಪಾವತಿಸಿದ್ದೀರಾ? ಎಂದು ಪ್ರಶ್ನಿಸಿದಾಗ ಕೃಷಿ ಆದಾಯಕ್ಕೆ ತೆರಿಗೆ ಎಲ್ಲಿದೆ? ಎಂದು ಅನಂತ್ ಕುಮಾರ್ ಮರು ಪ್ರಶ್ನೆ ಹಾಕಿದರು.

ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಎದ್ದು ನಿಂತ ಮಣಿ ಉತ್ತಪ್ಪ ‘ಇಂತಹ ಸದಸ್ಯರನ್ನು ಸಭೆಯಲ್ಲಿ ಕುಳ್ಳಿರಿಸಿ ಕೊಂಡು ಸಭೆ ನಡೆಸುವದು ಸರಿಯಲ್ಲ; ಅವರನ್ನು ಹೊರ ಕಳುಹಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.

ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಈ ಬಗ್ಗೆ ಚುನಾವಣಾ ಕಮಿಷನರ್‍ಗೆ ಪತ್ರ ಬರೆಯೋಣ, ಅವರೇ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ ಸಂದರ್ಭ ಎಲ್ಲಾ ಸದಸ್ಯರು ಈ ಬಗ್ಗೆ ನಿರ್ಣಯ ಕೈಗೊಳ್ಳೋಣ ಎಂದು ತಿಳಿಸಿ ನಿರ್ಣಯ ಕೈಗೊಳ್ಳಲಾಯಿತು.

ಇಷ್ಟಾದರೂ ಸಹ ಮಣಿಯದ ಸದಸ್ಯ ಮಣಿ ಉತ್ತಪ್ಪ ‘ಚುನಾವಣಾ ಆಯೋಗಕ್ಕೆ ಪತ್ರ ಬರೆಯೋಣ; ಆದರೆ ಅಲ್ಲಿಯವರೆಗೆ ಆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರಬಾರದು ಎಂದು ಪಟ್ಟು ಹಿಡಿದರು. ಈ ಸಂದರ್ಭ ಸದಸ್ಯ ಅನಂತಕುಮಾರ್, ಮಣಿ ಉತ್ತಪ್ಪ ವಿರುದ್ದ ಏಕವಚನ ಪದ ಪ್ರಯೋಗಿ ಸಿದ್ದು, ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.

ಪರಿಸ್ಥಿತಿಯ ಗಂಭೀರ ಅರಿತ ಅಧ್ಯಕ್ಷೆ ಪುಷ್ಪ ರಾಜೇಶ್, ಸಭೆಯನ್ನು ಅರ್ಧಗಂಟೆಗಳ ಕಾಲ ಮುಂದೂಡು ವದಾಗಿ ಹೊರ ತೆರಳಿದರು. ಇದೇ ಸಂದರ್ಭ ಮಣಿ ಉತ್ತಪ್ಪ ದರೋಡೆ ಕೋರರು ಎಂಬ ಶಬ್ದ ಪ್ರಯೋಗ ಮಾಡಿದರು. ಇದರಿಂದ ಕೆರಳಿದ ಸದಸ್ಯ ಅನಂತ್ ಕುಮಾರ್ ‘ಅಪ್ಪ’ ಎಂಬ ಪದ ಬಳಸಿದ್ದರಿಂದ ಮಹಿಳಾ ಸದಸ್ಯರು ಸೇರಿದಂತೆ ಎಲ್ಲರೂ ಅನಂತ್ ಕುಮಾರ್ ವಿರುದ್ಧ ತಿರುಗಿ ಬಿದ್ದು ತೀವ್ರ ತರಾಟೆಗೆ ತೆಗೆದುಕೊಂಡರು.

ಪರಸ್ಪರ ಮಾತಿನ ಚಕಮಕಿ ವಾಗ್ವಾದಗಳ ನಡುವೆ ಮಣಿ ಉತ್ತಪ್ಪ ಆಕ್ರೋಶ ಭರಿತರಾಗಿ ಮಾತನಾಡಿದಾಗ ಅವರ ಬಳಿ ಬಂದ ಸದಸ್ಯ ಅನಂತಕುಮಾರ್ ‘ಏನ್ ಇವಾಗ ಹೊಡಿತೀಯ ಬಾ ಹೊರಗಡೆ ಹೊಡೆದಾಡೋಣ’ ಎಂದರು.

ಸಭಾ ಗೌರವಕ್ಕೆ ವಿರುದ್ಧವಾಗಿ ಮಾತನಾಡಿದ್ದೂ ಅಲ್ಲದೆ ಅವಾಚ್ಯ ಪದ ಬಳಸಿದ್ದುದು ಇತರೆ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಕೆಲವು ಸದಸ್ಯರು ಅನಂತಕುಮಾರ್‍ರವರನ್ನು ಹಿಡಿದು ಸಭಾಂಗಣದಿಂದ ಹೊರ ತಳ್ಳಿದ ಘಟನೆಯೂ ನಡೆಯಿತು. ಹೊರ ಬಂದ ಸದಸ್ಯರಲ್ಲಿ ಆಕ್ರೋಶ ಹೊಗೆಯಾಡುತ್ತಿತ್ತು. ಒಂದು ಹಂತದಲ್ಲಿ ಮತ್ತೋರ್ವ ಸದಸ್ಯರು ‘ಹೊರಗೆ ಕರೆದೆಯಲ್ಲಾ ಏನ್ ಮಾಡ್ತೀಯಾ ಇವಾಗ, ಇದನ್ನೆಲ್ಲಾ ನಾವು ನೋಡಿ ಕೊಂಡೇ ಬಂದಿರೋದು’ ಎಂದು ಅನಂತ್‍ಗೆ ಸವಾಲು ಹಾಕಿದರು.

ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ; ಆದರೆ ಅಪ್ಪ, ಅಮ್ಮ, ಹೆಂಡತಿ ಕುಟುಂಬವನ್ನೆಲ್ಲಾ ಏಕೆ ಎಳೆಯುತ್ತೀರಿ? ಎಂದು ಅನಂತ್‍ಕುಮಾರ್‍ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡರು. ಈ ಸಂದರ್ಭ ‘ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಅನಂತ್ ಕುಮಾರ್ ಅವಲತ್ತುಕೊಂಡ ಘಟನೆಯೂ ನಡೆಯಿತು. ಸದಸ್ಯರ ನಡುವೆಯೇ ಅರುಚಾಟ, ಕಿರುಚಾಟ, ನೂಕಾಟದಿಂದ ಸಭೆಗೆ ಆಗಮಿಸಿದ್ದ ಅಧಿಕಾರಿಗಳು, ಹೊರಗಡೆ ನೆರೆದಿದ್ದ ಸಾರ್ವಜನಿಕರು ಪುಕ್ಕಟೆ ಮನೋರಂಜನೆ ಪಡೆದರು.

ನಂತರ ಸಭೆ ಸೇರಿದ ಸದಸ್ಯರು ಪಂಚಾಯತ್ ರಾಜ್ ಅಧಿನಿಯಮ ದಲ್ಲಿ ಯಾವದೇ ಸದಸ್ಯರಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಂದರ್ಭ ಆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿರಲು ಅವಕಾಶವಿಲ್ಲ. ಆದ್ದರಿಂದ ಈ ವಿಚಾರದ ಚರ್ಚೆ ಮುಗಿಯುವವರೆಗೆ ಸದಸ್ಯರಾದ ಅನಂತಕುಮಾರ್‍ರವರು ಹೊರ ಹೋಗಬೇಕೆಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮನವಿ ಮಾಡಿದರು.

ಈ ಮನವಿಯನ್ನು ಪುರಸ್ಕರಿಸಿದ ಅನಂತ ಕುಮಾರ್ ಸಭೆಯಿಂದ ಹೊರ ತೆರಳಿದರು. ನಂತರ ವಿಷಯಕ್ಕೆ ಸಂಬಂಧಿಸಿದಂತೆ ಬಹುತೇಕ ಸದಸ್ಯರು ಅನಂತ ಕುಮಾರ್‍ರವರ ವರ್ತನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿ ದರು. ನಂತರ ಚರ್ಚೆ ನಡೆದು ಚುನಾವಣಾ ಆಯೋಗ, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದು ಅವರ ಅಭಿಪ್ರಾಯ ಪಡೆಯುವ, ನಂತರ ವಿಶೇಷ ಸಭೆ ಕರೆದು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ, ಇದರೊಂದಿಗೆ ಸುಂಟಿಕೊಪ್ಪ ಠಾಣಾಧಿಕಾರಿ ಯಿಂದಲೂ ಮಾಹಿತಿ ತರಿಸಿಕೊಳ್ಳು ವಂತೆ ತೀರ್ಮಾನಿಸಲಾಯಿತು.

ಒಟ್ಟಾರೆ ತಾ.ಪಂ.ಯಲ್ಲಿ ನಾಲಗೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕಾದ ಕೆಲ ಸದಸ್ಯರುಗಳು, ಸಭಾ ಗೌರವ ವನ್ನು ಮೂರು ಕಾಸಿಗೆ ಹರಾಜು ಹಾಕಿದ್ದಲ್ಲದೆ, ಕುಸ್ತಿ ಅಖಾಡವನ್ನಾಗಿ ತಾ.ಪಂ. ಸಭಾಂಗಣವನ್ನು ಬಳಸಿ ಕೊಂಡಿದ್ದುದು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಣಕಿಸುವಂತಿತ್ತು! ಪೂರ್ವಾಹ್ನ 11 ಗಂಟೆಗೆ ಆರಂಭವಾದ ಸಭೆಯಲ್ಲಿ ಇದೊಂದೇ ವಿಚಾರ 12.45ರವರೆಗೂ ನಡೆದು ಸಮಯವನ್ನು ಕೊಂದುಹಾಕಿತು! -ವಿಜಯ್ ಹಾನಗಲ್