ಕೂಡಿಗೆ, ಜ. 21: ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ 16-17ನೇ ಸಾಲಿನ 2ನೇ ಹಂತದ ಗ್ರಾಮ ಸಭೆಗೆ ಅಧಿಕಾರಿ ವರ್ಗ ಗೈರು ಹಾಜರಾಗಿರುವದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಗ್ರಾಮಸಭೆಯನ್ನು ಮುಂದೂಡಲಾಗಿದೆ.

ಗ್ರಾಮದ ಆರ್‍ಎಂಸಿ ಮಾರ್ಕೆಟ್ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲತಾ ಸತೀಶ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯುತ್ತಿದ್ದ ಸಂದರ್ಭ ಗ್ರಾಮಸ್ಥರಾದ ಹುಚ್ಚಪ್ಪ, ತನುಕುಮಾರ್, ಜಗದೀಶ್, ನಾಗಣ್ಣ, ಗಣೇಶ್ ಮತ್ತಿತರರು ಗ್ರಾಮ ಸಭೆಗೆ ಎಷ್ಟು ಜನ ಅಧಿಕಾರಿಗಳು ಆಗಮಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿ ಸಭೆ ಮುಂದುವರೆಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೇವಲ 6 ಮಂದಿ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಿದ್ದದ್ದು ತಿಳಿದುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಸಭೆಗೆ ಹಾಜರಾಗುವ ತನಕ ಗ್ರಾಮಸಭೆಯನ್ನು ನಡೆಸಬಾರದೆಂದು ಪಟ್ಟುಹಿಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಗ್ರಾಮ ಸಭೆಯ ಆಹ್ವಾನ ಪತ್ರಿಕೆಯನ್ನು 36 ಇಲಾಖೆಗಳಿಗೆ ನೀಡಲಾಗಿದೆ. ಆದರೆ ಅಧಿಕಾರಿಗಳು ಮಾತ್ರ ಬೆರಳೆಣಿಕೆಯಲ್ಲಿ ಆಗಮಿಸಿದ್ದಾರೆ ಎಂದು ತಿಳಿಸಿದರು.

ತನುಕುಮಾರ್ ಮತ್ತು ದಿನೇಶ್ ಮಾತನಾಡಿ, ಗ್ರಾಮಸ್ಥರಿಗೆ ಅಗತ್ಯವಾದ ಮಾಹಿತಿ ನೀಡಬೇಕಾದ ಅರಣ್ಯ, ಕಂದಾಯ, ನೀರಾವರಿ, ತೋಟಗಾರಿಕೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇಲ್ಲ. ನಾವು ಯಾರನ್ನು ಪ್ರಶ್ನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಗುರುತಿಸಿರುವ ಪೈಸಾರಿ ಜಾಗದಲ್ಲಿ ಯಾವದೇ ಕಾರಣಕ್ಕೂ ಹೊರಗಿನ ಜನರಿಗೆ ನಿವೇಶನಗಳನ್ನು ನೀಡ ಬಾರದು. ಪಂಚಾಯಿತಿ ವ್ಯಾಪ್ತಿಯಲ್ಲೇ ನೂರಾರು ವಸತಿಹೀನ ಕುಟುಂಬಗಳು ವಾಸಿಸುತ್ತಿದ್ದು, ಮೊದಲು ಅವರಿಗೆ ಆದ್ಯತೆ ನೀಡಲು ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿಗೆ ಹಾಗೂ ಗ್ರಾಮಸ್ಥರಿಗೆ ಯಾವದೇ ಮಾಹಿತಿ ನೀಡದೆ ವಸತಿ ರಹಿತರ ಪಟ್ಟಿ ಮಾಡಿರುವದು ಸರಿಯಲ್ಲ. ಈ ಬಗ್ಗೆ ತಾ.ಪಂ. ಇಒ ಅವರು ಮಾಹಿತಿ ನೀಡಬೇಕು. ಅವರನ್ನು ಸಭೆಗೆ ಕರೆಸುವಂತೆ ಗ್ರಾಮಸ್ಥರು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ಜಿ.ಪಂ. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್. ಆರ್ ಶ್ರೀನಿವಾಸ್ ಮಾತನಾಡಿ, ಗ್ರಾಮ ಸಭೆ ಇರುವ ಬಗ್ಗೆ ತನಗೆ ಮೂರು ದಿನಗಳ ಹಿಂದೆಯಷ್ಟೇ ಮಾಹಿತಿ ನೀಡಲಾಗಿದೆ. ಒಂದು ವಾರ ಮುಂಚಿತವಾಗಿ ತಿಳಿಸಿದರೆ ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ ಅವರು ಸಭೆಗೆ ಬರುವಂತೆ ಮಾಡುತ್ತಿದ್ದೆ ಎಂದು ತಿಳಿಸಿದರು. ಮುಂದಿನ ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಹಾಜರಿರುವಂತೆ ಸಂಬಂಧಿಸಿದ ಮೇಲಧಿಕಾರಿಗಳಿಗೆ ಸೂಚಿಸಲಾಗುವದು ಎಂದು ತಿಳಿಸಿದರು.

ಗ್ರಾಮಸ್ಥರ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲತಾ ಸತೀಶ್ ಗ್ರಾಮ ಸಭೆಯನ್ನು ಮುಂದೂಡಿದರು. ಈ ಸಂದರ್ಭ. ನೋಡಲ್ ಅಧಿಕಾರಿ ನಾಗರಾಜಾಚಾರಿ, ತಾ.ಪಂ. ಸದಸ್ಯ ಜಯಣ್ಣ ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.