ಸುಂಟಿಕೊಪ್ಪ, ಸೆ. 4: ಇಲ್ಲಿನ ಹೆದ್ದಾರಿಯ ಕನ್ನಡ ವೃತ್ತದ ಸಮೀಪವಿರುವ ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಜೀಪೊಂದು ಚಲಾವಣೆಗೊಂಡು ಅದೃಷ್ಟವಶಾತ್ ಯಾವದೇ ಅನಾಹುತ ಸಂಭವಿಸಿದೇ ಪಾರಾದ ಘಟನೆ ನಡೆದಿದೆ.ಸಂತೆ ದಿನವಾದ ಇಂದು ಜನರನ್ನು ಬಾಡಿಗೆಗೆ ಕರೆದುಕೊಂಡು ಬಂದು ಇಲ್ಲಿನ ಮಸೀದಿಯ ಮುಂಭಾಗದಲ್ಲಿ ನಿಲ್ಲಿಸಿ ಅದರ ಚಾಲಕ ಜೀಪಿನ ಕೀಯನ್ನು ಗಾಡಿಯಲ್ಲಿ ಇಟ್ಟು ಹೋಗಿದ್ದನು. ಅದೇ ಜೀಪಿನಲ್ಲಿದ್ದ ಅಸ್ಸಾಂ ಮೂಲದವರು ಎನ್ನಲಾದ ಇಬ್ಬರು ಬಾಲಕರು ಕೀಯನ್ನು ಬಳಸಿ ಚಲಾಯಿಸಿದ ಪರಿಣಾಮ ಮುಂದಕ್ಕೆ ಹಾರಿದ ಜೀಪು ಸುಮಾರು 14 ಅಡಿ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಆ ಬಾಲಕರು ಯಾವದೇ ಅಪಾಯವಿಲ್ಲದೇ ಪಾರಾಗಿದ್ದಾರೆ.ಜೀಪು ಬಿದ್ದ ಸ್ಥಳದಲ್ಲಿ ಅಲ್ಲೇ ಪಕ್ಕದಲ್ಲಿರುವ ಜನತಾ ಕಾಲೋನಿಯ ಮಕ್ಕಳು ಜೀಪು ಬೀಳುವದಕ್ಕೆ 5 ನಿಮಿಷಗಳ ಮುನ್ನ ತಮ್ಮ ಪೋಷಕರು ಮನೆಗೆ ಕರೆದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದಾರೆ. ಮನೆಯೊಳಗೆ ಹೋಗುವಷ್ಟರಲ್ಲಿ ಈ ಅಪಘಾತ ಸಂಭವಿಸಿದೆ. ಒಂದು ವೇಳೆ ಅಪಘಾತ ಸಂಭವಿಸುವ ಸಮಯದಲ್ಲಿ ಮಕ್ಕಳು ಇದ್ದಿದ್ದರೆ ಸುಮಾರು 20 ರಷ್ಟು ಮಕ್ಕಳ ಸಾವು ನೋವು ಸಂಭವಿಸುತ್ತಿತ್ತು ಎನ್ನಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.