ಮಡಿಕೇರಿ, ಡಿ.2 : ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶಿಕ್ಷಕಿ ಪ್ರಮೀಳಾ ಅವರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹರೀಶ್‍ಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ತಾ.5 ರಂದು ಟಿ.ಶೆಟ್ಟಿಗೇರಿ ಹಾಗೂ ಶ್ರೀಮಂಗಲ ಗ್ರಾಮದಲ್ಲಿ ಪ್ರತಿಭಟನೆ ನಡೆಸಲು ಮಾನವ ಹಕ್ಕುಗಳ ಜಾಗೃತಿ ಸಮಿತಿ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಮರುಕಳಿಸದಂತೆ ಜಾಗೃತಿ ವಹಿಸಲು ಶಿಕ್ಷಕಿ ಪ್ರಮೀಳಾ ಅವರ ಪ್ರಕರಣದ ಆರೋಪಿಗೆ ಗಲ್ಲುಶಿಕ್ಷೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಹರೀಶ್ ಎಂಬಾತ ಪ್ರಮೀಳಾ ಅವರನ್ನು ಅಮಾನುಷವಾಗಿ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ. ಈತನ ಬಂಧನವಾಗಿದ್ದರೂ ಶಿಕ್ಷಕಿಗೆ ನ್ಯಾಯ ಸಿಗಬೇಕಾದರೆ

(ಮೊದಲ ಪುಟದಿಂದ) ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಮತ್ತು ಮೃತ ಶಿಕ್ಷಕಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಕುಸುಮಾವತಿ ಚಂದ್ರಶೇಖರ್ ಒತ್ತಾಯಿಸಿದರು. ಅಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವದೆಂದು ತಿಳಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ ಮಾತನಾಡಿ ಪ್ರಮೀಳಾ ಅವರ ಹತ್ಯೆ ಪ್ರಕರಣದ ಹಿಂದೆ ಇನ್ನೂ ಕೆಲವರ ಕೈವಾಡವಿದೆ ಎಂದು ಆರೋಪಿಸಿದರು. ಮೃತ ಶಿಕ್ಷಕಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕೆಂದು ಒತ್ತಾಯಿಸಿದ ಅವರು ಈ ಪ್ರಕರಣದಿಂದ ಜಿಲ್ಲೆಯ ಮಹಿಳೆಯರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಸ್ಸಾಂ ರಾಜ್ಯದಿಂದ ಕಾರ್ಮಿಕರಾಗಿ ವಲಸೆ ಬಂದಿರುವ ಯುವ ಜನತೆ ದುಶ್ಚಟಗಳ ದಾಸರಾಗಿದ್ದು, ಇವರುಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದೆ. ಆದ್ದರಿಂದ ಅಸ್ಸಾಂ ರಾಜ್ಯದ ಕಾರ್ಮಿಕರನ್ನು ಜಿಲ್ಲೆಯಿಂದ ಹೊರ ಕಳುಹಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಜೆ. ಸುಬ್ರಮಣಿ ಹಾಗೂ ಸದಸ್ಯರಾದ ಪರ್ಮಲೆ ಗಣೇಶ್ ಉಪಸ್ಥಿತರಿದ್ದರು.