ನಾಪೆÇೀಕ್ಲು, ಸೆ. 27: ಮಡಹಾಗಲ ಎಂಬ ಹೆಸರು ಕೇಳಿದೊಡನೆ ಇದ್ಯಾವದಪ್ಪ ಎಂದು ಹುಬ್ಬೇರಿಸುವವರೆ ಹೆಚ್ಚು. ಪಟ್ಟಣದಲ್ಲಿ ಏಕೆ ಇದನ್ನು ಬಲ್ಲವರು ಹಳ್ಳಿ ಗಳಲ್ಲೂ ವಿರಳ. ಈಗ ಏನಿದ್ದರೂ ಮಾರುಕಟ್ಟೆಯ ತರಕಾರಿಗಳ ಕಾರುಬಾರು.

ಕೊಡಗಿನ ಕಾಡುಗಳಲ್ಲಿ ಮಳೆಗಾಲ ಕಳೆದಾಗ ಸುತ್ತಾಡಿದರೆ ಹತ್ತಿಪ್ಪತ್ತು ಮಡಹಾಗಲ ಕಾಯಿಗಳನ್ನು ಕಿತ್ತು ತರುವದಂತೂ ಖಂಡಿತ. ಆದರೂ ಈಗ ಇದು ಬಲು ಅಪರೂಪವಾಗುತ್ತಿದ್ದು ಮುಂದೊಂದು ದಿನ ಹೆಸರಿಲ್ಲ ದಂತಾದೀತು. ಕಾಡು ಹಂದಿ, ಇಲಿ, ಹೆಗ್ಗಣಗಳ ಕಾಟದಿಂದ ಹಾಗೂ ಪ್ರಕೃತಿದತ್ತವಾಗಿ ಬೆಳೆಯುವ ಇದನ್ನು ಕೃಷಿ ಮಾಡಿದರೆ ಲಾಭವಿಲ್ಲ ಎನ್ನುವ ಕಾರಣಕ್ಕಾಗಿ ರೈತರು ಇದನ್ನು ಕೃಷಿ ಮಾಡುವದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಹಾಗಲಕಾಯಿ ಜಾತಿಗೆ ಸೇರಿದ ಇದನ್ನು ಮಡಹಾಗಲ, ಮೂಡ ಹಾಗಲ ಮತ್ತು ಕೊಡವ ಭಾಷೆಯಲ್ಲಿ ಪಾವಕ್ಕೆ ಎಂಥಲೂ ಕರೆಯುತ್ತಾರೆ. ಆದರೆ ಇದು ಹಾಗಲಕಾಯಿಯ ಕಹಿ ಗುಣವನ್ನು ಹೊಂದಿಲ್ಲ. ಇದು ಹಾಗಲಕಾಯಿಯಂತೆ ಜಾಷಧಿಯ ಗುಣಗಳನ್ನು ಹೊಂದಿದ್ದು, ಅಡುಗೆಗೆ ಬಹಳ ರುಚಿಕರವಾದ ಈ ತರಕಾರಿ. ಬಳ್ಳಿಜಾತಿಗೆ ಸೇರಿದ ಸಸ್ಯದ ಕೊಡುಗೆ. ಈ ಸಸ್ಯವು ಹಳದಿ ಬಣ್ಣದ ಹೂಗಳನ್ನು ಬಿಡುತ್ತದೆ. ಕಾಯಿ ಹಸಿರು ಬಣ್ಣದ ಮೇಲ್ಮೈ ಹೊಂದಿದ್ದು, ಹಸಿರು ಮುಳ್ಳಿನಂತೆ ಕಂಡು ಬರುತ್ತದೆ. ಇದು ಬೀಜದಿಂದ ಹಾಗೂ ಗೆಡ್ಡೆಯಿಂದ ವಂಶಾಭಿವೃದ್ಧಿ ಹೊಂದಬಲ್ಲದು, ಇದರ ಬುಡದಲ್ಲಿ ಗಡ್ಡೆಯು ಇದ್ದು, ಮೊದಲ ಮಳೆ ಪ್ರಾರಂಭದಲ್ಲಿ ಚಿಗುರೊಡೆದು, ಕಾಡು ಮರಗಳಲ್ಲಿ ಹಬ್ಬಿ ಮಳೆಗಾಲದ ಅನಂತರ ಕಾಯಿಗಳನ್ನು ಬಿಡುವದು ಈ ಸಸ್ಯದ ಗುಣ. ಕಾಯಿಗಳು ಹಣ್ಣಾದರೆ ಹಳದಿ ಬಣ್ಣದಿಂದ ಕೂಡಿದ್ದು ತಿರುಳು ಮತ್ತು ಬೀಜ ಹಾಗಲಕಾಯಿಯನ್ನು ಹೋಲುತ್ತದೆ.

ಇವುಗಳು ಸ್ವಚ್ಛಂಧವಾಗಿ ಗಾಳಿ, ಬೆಳಕು, ನೀರುಗಳನ್ನು ಬಳಸಿಕೊಂಡು ವಿಶಾಲವಾಗಿ ಹರಡಿ ಬೆಳೆಯುವ ದರಿಂದ ಹಾಗೂ ಇದಕ್ಕೆ ಯಾವದೇ ಕ್ರಿಮಿನಾಶಕ ಹಾಗೂ ರಸಾಯನಿಕಗಳ ಸ್ವರ್ಶವಿಲ್ಲದಿರುವದರಿಂದ ರುಚಿಯಲ್ಲಿ ಇದಕ್ಕೆ ಸರಿಸಾಟಿ ಬೇರೊಂದಿಲ್ಲ ಎನ್ನಬಹುದು.

ಇದನ್ನು ಕರ್ನಾಟಕದ ಕೆಲವು ಭಾಗಗಳಲ್ಲಿ ಕೃಷಿಯಾಗಿ ಬೆಳೆಯು ವವರು ಇದ್ದಾರೆ. ಈ ತರಕಾರಿಗೆ ಹೆಚ್ಚು ಬೇಡಿಕೆ ಇದ್ದು ಕೆ.ಜಿ.ಯೊಂದಕ್ಕೆ 100-150 ರೂಗಳವರೆಗೂ ದೊರೆಯಬಲ್ಲದು. ಕೃಷಿಯಾಗಿ ಮಡಹಾಗಲವನ್ನು ಬೆಳೆಸಬೇಕು ಎಂದಿದ್ದರೆ ಹಣ್ಣನ್ನು ಬೂದಿ ಸೇರಿಸಿದ ಮಣ್ಣಿನಲ್ಲಿ ಹುದುಗಿಡಬೇಕು. ಮುಂದಿನ ಮಳೆಗಾಲದಲ್ಲಿ ಬಳ್ಳಿ ಹುಟ್ಟಿ ಬರುತ್ತದೆ ಅದರ ಗಡ್ಡೆಯನ್ನು ಒಂದು ಒಂದೂವರೆ ಅಡಿ ಆಳದ ಗುಂಡಿ ತೆಗೆದು ನೆಡಬೇಕು ಒಂದು ವೇಳೆ ಗಡ್ಡೆ ಹಾಳದರೂ ಮತ್ತೆ ಚಿಗುರುತ್ತದೆ, ಎಂಬದು ಮಡಹಾಗಲವನ್ನು ನೆಟ್ಟು ಬೆಳೆಸಿದ ರೈತರ ಅನುಭವದ ನುಡಿ. ಜೌಷಧೀಯ ಗುಣಗಳನ್ನು ಹೊಂದಿರುವ ಈ ಮಡಹಾಗಲ ಗಿಡದ ಗೆಡ್ಡೆಯನ್ನು ಮೂಲವ್ಯಾಧಿ ಮತ್ತು ಸಕ್ಕರೆ ಕಾಯಿಲೆಯಂತಹ ರೋಗವನ್ನು ತಡೆಯಲು ಬಳಸುತ್ತಾರೆ.

ಇಷ್ಟೆಲ್ಲ ರುಚಿಕರವಾದ, ಉಪಯುಕ್ತವಾದ ತರಕಾರಿಯನ್ನು ಮನೆಯಂಗಳದಲ್ಲಿ ಬೆಳೆದರೆ ಅದರಿಂದ ಕುಟುಂಬಕ್ಕೆ ಹಾನಿ ಯಾಗುವದೆಂಬ ಮೂಢನಂಬಿಕೆ ಇದೆ.

ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಇದನ್ನು ಕೃಷಿ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಇತ್ತೀಚೆಗೆ ಕೆಲವರು ಇದನ್ನು ಬೆಳೆಯಲು ಉತ್ಸುಕತೆ ತೋರುತ್ತಿರು ವದು ಕಂಡು ಬರುತ್ತಿದೆ. ಕೆಲವೊಮ್ಮೆ ಬೇಕೆಂದರೂ ದೊರೆಯದಿರುವ ಅಪರೂಪದ ತರಕಾರಿ ಇದು. ಏನೇ ಆದರೂ ಮಡಹಾಗಲದ ರುಚಿ ಸವಿದವರಿಗೆ ಗೊತ್ತು.

ಇದನ್ನು ಮಹಾಭಾರತದ ಕಾಲದಲ್ಲಿ ವನವಾಸದಲ್ಲಿದ್ದ ಪಾಂಡವರು ಬಳಸುತ್ತಿದ್ದುದರಿಂದ ಇವುಗಳಿಗೆ ಪಾಂಡವರಹಾಗಲ ಎಂದು ಕೂಡ ಕರೆಯಲಾಗುತ್ತದೆ. ಕುಕರ್‍ಬಿಟೇಸಿ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಮೊರ್ಮೊಡಿಕಾ ಡಯೋಕ.

- ಪಿ.ವಿ. ಪ್ರಭಾಕರ್