ಮಡಿಕೇರಿ ಜ. 9: ನಿತ್ಯ ಸಂಕಷ್ಟದ ಜೀವನವನ್ನು ನಡೆಸುತ್ತಿರುವ ಮಡಿವಾಳ ಜನಾಂಗಕ್ಕೆ ಸರಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಮಡಿವಾಳರ ಹೋರಾಟ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಬಸವರಾಜು ಕೊಡಗು ಜಿಲ್ಲೆಯಲ್ಲಿ ಸುಮಾರು 22 ಸಾವಿರ ಮಂದಿ ಮಡಿವಾಳರಿದ್ದು, ಸರಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಬಹುತೇಕ ಎಲ್ಲಾ ಸಮಾಜಗಳಿಗೆ ಸಮುದಾಯ ಭವನ ಇದೆಯಾದರೂ ಮಡಿವಾಳ ಸಮಾಜಕ್ಕೆ ಮಾತ್ರ ಇಲ್ಲಿಯವರೆಗೆ ಯಾವದೇ ಸರಕಾರ ಸಮುದಾಯ ಭವನವನ್ನು ನೀಡಿಲ್ಲ. ವಸತಿ ಸೌಲಭ್ಯದಿಂದಲೂ ಮಡಿವಾಳರು ವಂಚಿತರಾಗಿದ್ದಾರೆ. ಬಟ್ಟೆಗಳನ್ನು ಶುಚಿಗೊಳಿಸುವದಕ್ಕೆ ಮತ್ತು ಮತಗಳನ್ನು ಪಡೆಯುವದಕ್ಕಾಗಿ ಮಾತ್ರ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಮಡಿವಾಳ ಜನಾಂಗವನ್ನು ಪ್ರತ್ಯೇಕವಾಗಿ ಗುರುತಿಸಿ ನ್ಯಾಯ ಒದಗಿಸುತ್ತಿಲ್ಲವೆಂದು ಆರೋಪಿಸಿದರು.
ಬಟ್ಟೆ ಶುಚಿಗೊಳಿಸುವ ಸಂದರ್ಭ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದ್ದು, ಮಡಿವಾಳ ವೃತ್ತಿ ನಿರತರಿಗೆ ಜೀವನ ಭದ್ರತೆ ಇಲ್ಲದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಬಸವರಾಜು ಮಡಿವಾಳ ಬಾಂಧವರು ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ತಮಗೆ ಸಿಗಬೇಕಾದ ಹಕ್ಕನ್ನು ಪಡೆದು ಕೊಳ್ಳಬೇಕೆಂದು ಕರೆ ನೀಡಿದರು.
ಸಮಿತಿಯ ಜಿಲ್ಲಾಧ್ಯಕ್ಷ ಎಂ.ಡಿ. ನಂಜಪ್ಪ ಮಾತನಾಡಿ ಮಡಿವಾಳ ಸಮುದಾಯವನ್ನು ಸಂಘಟಿಸುವದ ಕ್ಕಾಗಿ ಜಿಲ್ಲಾ ಸಮಿತಿಯನ್ನು ರಚಿಸ ಲಾಗಿದ್ದು, ಯಾವದೇ ಭಾಷೆಯನ್ನು ಮಾತನಾಡುವ ಮಡಿವಾಳರು ಸಮಿತಿಯ ಸದಸ್ಯತ್ವವನ್ನು ಪಡೆಯಬಹುದೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್ ಮಾತನಾಡಿ ಶೇ.50 ರಷ್ಟು ಮಂದಿ ಮಡಿವಾಳರು ಇಂದಿಗೂ ಬಟ್ಟೆ ಶುಚಿಗೊಳಿಸುವ ಕಾರ್ಯವನ್ನೇ ಮಾಡುತ್ತಿದ್ದು, ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಇವರುಗಳಿಗೆ ನ್ಯಾಯ ಸಿಗಬೇಕಾದರೆ ಸಂಘಟನೆ ಮುಖ್ಯ ವಾಗಿದ್ದು, ನೂತನ ಸಮಿತಿಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವವರು ಈ ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ ಎಂದರು. 94490 92442, 96115 21865, 94829 44005.
ಸುದ್ದಿಗೋಷ್ಠಿಯಲ್ಲಿ ಗೌರವ ಅಧ್ಯಕ್ಷರಾದ ಸುಶೀಲ ಅಪ್ಪಾಜಿ ಹಾಗೂ ಕಾರ್ಯದರ್ಶಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.