ಸೋಮವಾರಪೇಟೆ, ಆ. 29: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ಕೈಗೊಂಡಿರುವ ಸಾವಿರಾರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಚಿಸಲಾಗಿರುವ ಅಕ್ರಮ - ಸಕ್ರಮ ಸಮಿತಿ ಸಭೆ ಕರೆಯದೇ ಇರುವದರಿಂದ ರೈತರಿಗೆ ಅನ್ಯಾಯವಾಗಿದ್ದು, ತಕ್ಷಣ ಸಭೆ ಕರೆಯುವಂತೆ ಒತ್ತಾಯಿಸಿ ಶಾಸಕರಿಗೆ ಪತ್ರ ಚಳುವಳಿ ಮೂಲಕ ಒತ್ತಾಯಿಸಲು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಣಯಿಸಲಾಯಿತು.

ಭೂ ಹಕ್ಕುದಾರರ ವೇದಿಕೆಯ ಮಡಿಕೇರಿ, ವೀರಾಜಪೇಟೆ ಕ್ಷೇತ್ರ ಸಮಿತಿ ಸಂಚಾಲಕ ಗೋವಿಂದ ರಾಜು ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ, ಅಕ್ರಮ-ಸಕ್ರಮ ಸಮಿತಿ ಸಭೆ ನಡೆಯದಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಹಕ್ಕುಪತ್ರಗಳಿಲ್ಲದ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಪ್ರಾಣಿಗಳಂತೆ ಬದುಕು ಸಾಗಿಸಬೇಕಾಗಿದೆ. ಹಕ್ಕುಪತ್ರಕ್ಕಾಗಿ ರೈತರು ಹೋರಾಟಕ್ಕೆ ಧುಮುಕ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

1999 ರಿಂದ ರೈತರು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿಯನ್ನು ಸಲ್ಲಿಸುತ್ತ ಬಂದಿದ್ದಾರೆ. ನಮೂನೆ 50ರಲ್ಲಿ ಸೋಮವಾರಪೇಟೆ ತಾಲೂಕು ಕಚೇರಿಗೆ 6430 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ 3360 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ನಮೂನೆ 53ರಲ್ಲಿ 7625 ಅರ್ಜಿಗಳು ಸಲ್ಲಿಕೆಯಾಗಿದ್ದು, 3632 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿಗಳು 487 ಅರ್ಜಿಗಳನ್ನು ಸಲ್ಲಿಸಿದ್ದು, 160 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಈಗ ತಾಲೂಕು ಕಚೇರಿಯಲ್ಲಿ 8464 ಅರ್ಜಿಗಳು ಹಲವಾರು ವರ್ಷಗಳಿಂದ ಧೂಳು ಹಿಡಿಯುತ್ತಿದೆ ಎಂದು ಗೋವಿಂದರಾಜು ಆರೋಪಿಸಿದರು.

ಅಕ್ರಮ-ಸಕ್ರಮ ಸಮಿತಿಯ ಇನ್ನೋರ್ವ ಸದಸ್ಯ ಎಂ.ಡಿ.ಸುಬ್ಬಯ್ಯ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಅಕ್ರಮ - ಸಕ್ರಮ ಸಮಿತಿಯ ಎರಡು ಸಭೆಗಳು ಮಾತ್ರ ನಡೆದಿವೆ. ಒಟ್ಟು 5 ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ ಎಂದು ಹೇಳಿದರು. ಸಭೆಯನ್ನೇ ಕರೆಯದಿದ್ದರೆ ಅರ್ಜಿಗಳ ವಿಲೇವಾರಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸುಡುಗಳಲೆ ಪುಟ್ಟಸ್ವಾಮಿ ಹಾಗೂ ಗರಗಂದೂರು ಲಕ್ಷ್ಮಣ ಅವರುಗಳು ಕಂದಾಯ ಇಲಾಖೆ ಕೆಲ ಸಿಬ್ಬಂದಿಗಳು ತಹಶೀಲ್ದಾರರನ್ನೇ ಹೆದರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ರೈತರ ಹಕ್ಕುಪತ್ರಕ್ಕೆ ಕೊಕ್ಕೆ ಹಾಕಿ ಕಾಸು ಮಾಡುವದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು. ಹೋರಾಟದ ಮೂಲಕ ನಮ್ಮ ಆಸ್ತಿ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಅನೇಕ ರೈತರು ಅಭಿಪ್ರಾಯಿಸಿದರು. ಸಭೆಯಲ್ಲಿ ಹಿರಿಯ ವಕೀಲ ನಾಗರಾಜು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಕೊಡಗು ಮತ್ತು ಚಿಕ್ಕಮಗಳೂರು ಸಂಚಾಲಕ ಸುನಂದ ಕುಮಾರ್ ಹಾಗೂ ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.