ಕುಶಾಲನಗರ, ಸೆ. 28: ಅಕ್ರಮ - ಸಕ್ರಮ ಯೋಜನೆಯಡಿ ವಾಸದ ಮನೆಗಳನ್ನು ಸಕ್ರಮಗೊಳಿಸಲು ಸಲ್ಲಿಸಿದ್ದ ಅರ್ಜಿಗಳನ್ನು ಏಕಾಏಕಿ ತಿರಸ್ಕರಿಸಿರುವ ಕಂದಾಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಸ್ಥಳೀಯ ವಾಲ್ನೂರು ತ್ಯಾಗತ್ತೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಅಭ್ಯತ್ಮಂಗಲದ ಸ.ನಂ 10 ರ 18.36 ಎಕರೆ ಸರಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ಸುಮಾರು 145 ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿತ್ತು. ಈ ಸಂಬಂಧ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಜಿ.ಎಸ್.ಕೃಷ್ಣ ಅವರ ಸಮ್ಮುಖದಲ್ಲಿ ಅರ್ಜಿ ಪರಿಶೀಲನೆ ಹಾಗೂ ಗ್ರಾಮಸ್ಥರ ವಿಚಾರಣೆಗೆ ಬುಧವಾರ ದಿನ ನಿಗದಿ ಗೊಳಿಸಲಾಗಿತ್ತು. ಅಂತೆಯೇ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರು ಕಂದಾಯ ಇಲಾಖೆಗೆ ಆಗಮಿಸಿದ್ದ ಸಂದರ್ಭ ಅಯ್ಯಪ್ಪ ದೇವರಕಾಡು ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅರ್ಜಿಗಳನ್ನು ಏಕಾಏಕಿ ತಿರಸ್ಕರಿಸ ಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ತಹಶೀಲ್ದಾರ್ಗೆ ದಿಗ್ಬಂಧನ ಹೇರಿ ನಾಡಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಅರ್ಜಿದಾರರು ತಾಲೂಕು ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು. ಯಾವದೇ ರೀತಿಯ ವಿಚಾರಣೆ ಕೈಗೊಳ್ಳದೆ ಗೌಪ್ಯವಾಗಿ ಅರ್ಜಿಗಳನ್ನು ತಿರಸ್ಕರಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಫಲಾನುಭವಿಗಳು ಜಿಲ್ಲಾಧಿüಕಾರಿಗಳು ಸರ್ಮಪಕ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಸುನೀತಾ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ನಿವಾಸಿಗಳನ್ನು ದೇವರಕಾಡು ಹೆಸರಿನಲ್ಲಿ ನಿರಾಶ್ರಿತರಾಗಿಸಲು ಕ್ರಮಕೈಗೊಳ್ಳುತ್ತಿರುವ ಕ್ರಮದ ಕುರಿತು ಈಗಾಗಲೇ ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇಂದು ಅರ್ಜಿ ಪರಿಶೀಲನೆಗೆಂದು ಗ್ರಾಮಸ್ಥರನ್ನು ಆಹ್ವಾನಿಸಿ ಯಾವದೇ ರೀತಿಯ ತನಿಖೆ ಕೈಗೊಳ್ಳದೆ ಅರ್ಜಿಗಳನ್ನು ತಿರಸ್ಕರಿಸುತ್ತಿರುವದು ಖಂಡನೀಯ ವಿಚಾರ. ಕೂಡಲೇ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ವಿ.ಪಿ. ಶಶಿಧರ್ ಮಾತನಾಡಿ, ಫಲಾನು ಭವಿಗಳ ಅರ್ಜಿಗಳನ್ನು ತಹಶೀಲ್ದಾರ್ ಹಂತದಲ್ಲಿಯೇ ತಿರಸ್ಕರಿಸದೆ ಉನ್ನತ ಅಧಿಕಾರಿಗಳು ಅರ್ಜಿಗಳ ಸಮರ್ಪಕ ಪರಿಶೀಲನೆ ನಡೆಸಿ ಕ್ರಮಕೈಗೊಂಡು ಬಡವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಖಾಲಿದ್, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯ್ತಿ ಸದಸ್ಯೆ ಜಮೀಲ, ಗ್ರಾಮದ ಪ್ರಮುಖರಾದ ಹಸೈನಾರ್, ವೆಂಕಟೇಶ್, ರಾಜು, ಶಿವದಾಸ್, ಮಣಿ ಮೊದಲಾದವರಿದ್ದರು.
ತಹಶೀಲ್ದಾರ್ ಸ್ಪಷ್ಟನೆ: ಮನೆಗಳನ್ನು ನಿರ್ಮಿಸಿರುವ ಬಗ್ಗೆ ವಿಚಾರಣೆ ಕೈಗೊಳ್ಳುತ್ತಿದ್ದ ವೇಳೆ ಅನಾವಶ್ಯಕವಾಗಿ ಪ್ರತಿಭಟನೆ ನಡೆಸಿ ನಾಡಕಛೇರಿಯಲ್ಲಿ ಕಛೇರಿ ಕರ್ತವ್ಯಕ್ಕೆ ಕೆಲವು ಅಡ್ಡಿ ಮಾಡಿರುವದಾಗಿ ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೆಲವರು ಗುಂಪುಗೂಡಿ ಅವಾಚ್ಯ ಶಬ್ಧಗಳಿಂದ ತಮ್ಮನ್ನು ನಿಂದಿಸುವದರೊಂದಿಗೆ ವಿನಾಕಾರಣ ಗೊಂದಲ ಉಂಟು ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ವರದಿ ಸಲ್ಲಿಸುವದಾಗಿ ಅವರು ಮಾಹಿತಿ ನೀಡಿದರು.