ಕುಶಾಲನಗರ, ನ. 26: ಅಕ್ರಮ ಮರಳು ಸಾಗಾಟ ಹಿನ್ನಲೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸೇರಿದಂತೆ ಮೂವರನ್ನು ಬಂಧಿಸಿ ಎರಡು ಲಾರಿ ಮರಳು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡ ಪ್ರಕರಣ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಿ.ಬಿ ಜಗದೀಶ್, ಚಾಲಕರಾದ ಮಂಜುನಾಥ್, ಸಂಗಮೇಶ್ ಬಂಧಿತ ಆರೋಪಿಗಳು. ಕುಶಾಲನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮವಾಗಿ ಮರಳು ಸಾಗಾಟ ಹಿನ್ನಲೆಯಲ್ಲಿ ಮಾಹಿತಿ ಮೇರೆಗೆ ಕುಶಾಲನಗರ ಡಿವೈಎಸ್ಪಿ ಸಂಪತ್‍ಕುಮಾರ್ ಕಾರ್ಯಾಚರಣೆ ನಡೆಸಿದ್ದು ಸಿದ್ದಲಿಂಗಪುರ ಬಳಿ ಎರಡು ಲಾರಿಗಳು (ಕೆಎ.12.ಎ.6715, ಕೆಎ.12.ಬಿ.1065) ಮರಳು ಸಾಗಾಟ ಸಂದರ್ಭ ವಶಪಡಿಸಿಕೊಂಡಿದ್ದಾರೆ. ಈ ಲಾರಿಗಳಿಗೆ ಬೆಂಗಾವಲಾಗಿ ಸ್ವಿಫ್ಟ್ ಕಾರಿನಲ್ಲಿ (ಕೆಎ.12.ಎನ್.7520) ತೆರಳುತ್ತಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಮತ್ತು ಆತನಿಗೆ ಸೇರಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ 50 ಕ್ಕೂ ಅಧಿಕ ಲಾರಿ ಲೋಡ್ ಮರಳು ಸಾಗಾಟ ಮಾಡಿರುವ ಬಗ್ಗೆ ವಿಚಾರಣೆ ಸಂದರ್ಭ ಮಾಹಿತಿ ಹೊರಬಿದ್ದಿದೆ. ದುಪ್ಪಟ್ಟು ದರಕ್ಕೆ ಮರಳು ಮಾರಾಟ ಮಾಡುತ್ತಿರುವ ದಂಧೆಯ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ಆಲೂರು ಸಿದ್ದಾಪುರ ಬಳಿ ಕೊಡಗು-ಹಾಸನ ಗಡಿಭಾಗದ ನದಿಯಿಂದ ಅಕ್ರಮವಾಗಿ ಮರಳು ಸಾಗಾಟವಾಗುತ್ತಿರುವ ಬಗ್ಗೆ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾದ ರೇಷ್ಮ, ನಾಗೇಂದ್ರ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಕೈಗೊಳ್ಳುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದ್ದು ಠಾಣಾಧಿಕಾರಿ ಜೆ.ಇ.ಮಹೇಶ್ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಂಡಿದ್ದಾರೆ.