*ಸಿದ್ದಾಪುರ, ಡಿ. 4: ಅನಧಿಕೃತ ಮರಳು ಶೇಖರಣೆ ಮಾಡಿರುವದನ್ನು ವಶಪಡಿಸಿಕೊಂಡ ಸಿದ್ದಾಪುರ ಪೊಲೀಸರು ಅದೇ ಮರಳನ್ನು ರಾತ್ರೋ ರಾತ್ರಿ ಮತ್ತೊಬ್ಬರಿಗೆ ಮಾರಿರುವ ಘಟನೆ ಸಿದ್ದಾಪುರದಲ್ಲಿ ನಡೆದಿರುವ ಸಂಶಯವಿದೆ. ಸಿದ್ದಾಪುರ, ಕೂಡುಗದ್ದೆ, ನಲ್ವತ್ತೇಕರೆ, ಬರಡಿ, ಬೆಟ್ಟದಕಾಡು ಮುಂತಾದೆಡೆ ಅಕ್ರಮ ಮರಳು ದಂಧೆ ನಡೆಯುತ್ತಿರುವದಾಗಿ ಶಕ್ತಿ ಪತ್ರಿಕೆ ವರದಿ ಮಾಡಿದ ಹಿನ್ನೆಲೆ ಎಚ್ಚೆತ್ತು ಕೊಂಡ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸರು ಧಾಳಿ ನಡೆಸಿ ಕೂಡುಗದ್ದೆ ಭಾಗದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಮುಟ್ಟುಗೋಲು ಹಾಕಲಾಗಿತ್ತು.

ವಿಪರ್ಯಾಸವೆಂದರೆ, ಮುಟ್ಟುಗೋಲಾದ ಮರಳನ್ನು ಮೂರನೆ ವ್ಯಕ್ತಿಯೊಂದಿಗೆ ಡೀಲ್ ಕುದುರಿಸಿ ರಾತ್ರಿ ವೇಳೆಯಲ್ಲಿ ಪಿಕ್‍ಅಪ್ ವ್ಯಾನ್ ಒಂದರಲ್ಲಿ ತುಂಬಿ ಪಳ್ಳಕ್ಕರೆ ಸಮೀಪದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ‘ಸೇಫ್’ ಆಗಿ ಇಳಿಸಿ ಕೊಟ್ಟಿದ್ದಾರೆ. ಈ ಪ್ರಕರಣದ ವೀಡಿಯೋ ತುಣುಕೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡು ತ್ತಿದ್ದು, ಸಿದ್ದಾಪುರದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಅನುಮಾನ: ಈ ಪ್ರಕರಣ ಹಿಂದೆ ಮೂರು ಇಲಾಖೆಯ ಸಿಬ್ಬಂದಿಗಳ ಕೈವಾಡ ಇರುವದಾಗಿ ಕೂಡುಗದ್ದೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಶೇಷ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು ಡೀಲ್ ಕುದುರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬರುತ್ತಿದೆ.

ಕೂಡುಗದ್ದೆ ನದಿ ದಡದಲ್ಲಿ ಅಕ್ರಮ ಮರಳು ದಂಧೆ ಕೋರರು ಶೇಖರಿಸಿಟ್ಟ ಮರಳು ಮುಟ್ಟುಗೋಲು ಸಂದರ್ಭ ಇಲ್ಲಿನ ನಿವಾಸಿ ರಮೇಶ್ ಎಂಬುವವರು ತಮ್ಮ ಮನೆ ಕೆಲಸಕ್ಕಾಗಿ ಖರೀದಿಸಿಟ್ಟ ಮರಳನ್ನೂ ಪೊಲೀಸರು ವಾಹನಗಳಲ್ಲಿ ತುಂಬಿ ಕೊಂಡೊಯ್ದಿದ್ದಾರೆ ಎಂಬುದಾಗಿ ರಮೇಶ್ ಪತ್ನಿ ಸೀನಾ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

-ಅಂಚೆ ಮನೆ ಸುಧಿ