ವರದಿ-ಚಂದ್ರಮೋಹನ್
ಕುಶಾಲನಗರ, ನ. 6: ಕುಶಾಲನಗರ ಸೇರಿದಂತೆ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ಬೆಲೆಬಾಳುವ ಮರಗಳು ರಾಜಾರೋಷವಾಗಿ ಸಾಗಾಟವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ರಕ್ಷಿತಾರಣ್ಯ, ಖಾಸಗಿ ತೋಟಗಳಲ್ಲಿ ಬೀಟೆ, ತೇಗದ ಮರಗಳು ಅಕ್ರಮವಾಗಿ ಸಾಗಾಟವಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯ ಪ್ರಕರಣಗಳನ್ನು ಮಾತ್ರ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗು ತ್ತಿರುವದು ಕಂಡುಬಂದಿದೆ.
ಖಾಸಗಿ ತೋಟಗಳಿಂದ ಯಥೇಚ್ಚವಾಗಿ ಬೆಲೆಬಾಳುವ ಮರಗಳು ಜಿಲ್ಲೆಯ ಹೊರ ಭಾಗಗಳಿಗೆ ಸಾಗಾಟವಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕುವಲ್ಲಿ ಅರಣ್ಯ ಇಲಾಖೆ ವಿಫಲವಾಗುತ್ತಿದೆ ಎನ್ನುವ ದೂರುಗಳು ವ್ಯಕ್ತಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಖಾಸಗಿ ತೋಟದ ಮಾಲೀಕರ ಅನುಪಸ್ಥಿತಿ ಯಲ್ಲಿ ಕೆಲವರು ಈ ಅಕ್ರಮ ದಂಧೆಯಲ್ಲಿ ತೊಡಗಿರುವದೇ ಈ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ. ಬಳಂಜಿ, ಸಿಲ್ವರ್ ಮತ್ತಿತರ ಮರಗಳ ಸಾಗಾಟಕ್ಕೆ ಸರಕಾರದಿಂದ ಅನುಮತಿ ದೊರೆತ ನಂತರ ಇಂತಹ ದಂಧೆಗಳು ಅಧಿಕವಾಗಿದ್ದು ಖಾಸಗಿ ತೋಟಗಳಲ್ಲಿ ಬೀಟೆ, ತೇಗ ಮತ್ತಿತರ ಬೆಲೆಬಾಳುವ ಮರಗಳು ಅಕ್ರಮವಾಗಿ ಕಟಾವಾಗು ತ್ತಿರುವದು ಇತ್ತೀಚಿನ ಬೆಳವಣಿಗೆ ಯಾಗಿದೆ.
ಕೇರಳದ ಕೆಲವರು ಸ್ಥಳೀಯರ ಸಹಕಾರದೊಂದಿಗೆ ಇಂತಹ ಮರಗಳನ್ನು ಕೆಲವು ಸ್ಥಳೀಯ ಮರದ ಮಿಲ್‍ಗಳಿಗೆ ಸಾಗಿಸುತ್ತಿರುವ ಬಗ್ಗೆಯೂ ವದಂತಿಗಳು ಕೇಳಿಬರುತ್ತಿವೆ. ಇನ್ನೊಂದೆಡೆ ರಾಜಾರೋಷವಾಗಿ ಲಾರಿಗಳಲ್ಲಿ ಮರ ಸಾಗಾಟ ಹೇರಳವಾಗಿ ಸಾಗುತ್ತಿರುವದು ಕೊಡಗು ಜಿಲ್ಲೆಯ ಪರಿಸರಕ್ಕೆ ಧಕ್ಕೆ ಉಂಟು ಮಾಡಲು ಕಾರಣವಾಗುತ್ತಿದೆ. ಸುಂಟಿಕೊಪ್ಪ, ಮೋದೂರು, ಸಿದ್ದಾಪುರ, ಅಮ್ಮತ್ತಿ-ಒಂಟಿಯಂಗಡಿ, ಮಾಲ್ದಾರೆ, ಮೂರ್ನಾಡು, ಚೆಟ್ಟಳ್ಳಿ, ಹೆಬ್ಬಾಲೆ ವ್ಯಾಪ್ತಿಗಳಲ್ಲಿ ಖಾಸಗಿ ತೋಟಗಳಿಂದ ಬೀಟೆ, ತೇಗದ ಮರಗಳು ಅಕ್ರಮವಾಗಿ ಕಡಿದು ಸಾಗಿಸುವಲ್ಲಿ ಮರಗಳ್ಳರು ಯಶಸ್ವಿಯಾಗುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಮಾಲ್ದಾರೆ ರಕ್ಷಿತಾರಣ್ಯದಿಂದಲೂ ತೇಗದ ಮರಗಳು ಸಾಗಾಟವಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿವೆ.
ಕುಶಾಲನಗರ, ಶಿರಂಗಾಲ ಹಾಗೂ ಸಂಪಾಜೆ ಮತ್ತು ಕೇರಳ ಗಡಿಭಾಗದ ಚೆಕ್‍ಪೋಸ್ಟ್‍ಗಳಲ್ಲಿ ದಂಧೆಕೋರರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ತಪ್ಪಿಸಿ ಇಂತಹ ಕುಕೃತ್ಯದಲ್ಲಿ ತೊಡಗಿರುವ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಕೆಲವೆಡೆ ಇಲಾಖಾ ಸಿಬ್ಬಂದಿಗಳ ಕುಮ್ಮಕ್ಕು ಇದಕ್ಕೆ ಕಾರಣ ಎನ್ನುವ ಸಂಶಯವೂ ವ್ಯಕ್ತಗೊಳ್ಳುತ್ತಿದೆ. ಕುಶಾಲನಗರದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇವಲ 4 ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು ಅಕ್ರಮ ದಂಧೆಕೋರರು ಕ್ಯಾರೇ ಅನ್ನದೆ ಮರ ಸಾಗಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ ಎನ್ನುವದು ಈ ಭಾಗದ ನಾಗರಿಕರ ದೂರಾಗಿದೆ.
ಈ ಬಗ್ಗೆ ಕೊಡಗು ಅರಣ್ಯ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್‍ಕುಮಾರ್ ಅವರೊಂದಿಗೆ `ಶಕ್ತಿ' ಮಾಹಿತಿ ಬಯಸಿದಾಗ, ಈ ಬಗ್ಗೆ ಕೆಲವು ದೂರುಗಳು ಬರುತ್ತಿದ್ದು ಇಂತಹ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕುವದರೊಂದಿಗೆ ಅಕ್ರಮ ದಂಧೆಯಲ್ಲಿ ಪಾಲ್ಗೊಂಡವರ ಮೇಲೆ ಇಲಾಖೆಯಿಂದ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಲಯದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಯಾವದೇ ಮಾಹಿತಿ ಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ಅವರು ಕೋರಿದ್ದಾರೆ.