ಕರಿಕೆ, ಅ. 25: ಪೇರೂರು ಗ್ರಾಮದ ಪೈಸಾರಿ ಜಮೀನಿನಿಂದ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ಸುಮಾರು ರೂ. 4 ಲಕ್ಷ ಮೌಲ್ಯದ ಬೀಟಿ ಮರದ ನಾಟಾಗಳನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಂಗಪ್ಪ ಅವರ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಪಿ.ಟಿ. ಶಶಿ ಹಾಗೂ ವಿಜಯಕುಮಾರ್ ನೇತೃತ್ವದ ತಂಡ ಧಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಸ್ವರಾಜ್ ಮಜ್ದಾ (ಕೆಎ 21, 8542) ಹಾಗೂ ಮಾರುತಿ ಕಾರು (ಕೆಎ 05 ಝೆಡ್ 167)ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ಪಿ.ಎ. ಅಬ್ಬಾಸ್ ತಲೆಮರೆಸಿಕೊಂಡಿದ್ದು, ಲಾರಿ ಚಾಲಕ ಲಾರಿಯನ್ನು ಇಳಿಜಾರಿನಲ್ಲಿ ಮರಕ್ಕೆ ಡಿಕ್ಕಿಪಡಿಸಿದ್ದು, ಅದೃಷ್ಟವಶಾತ್ ಅರಣ್ಯಾಧಿಕಾರಿಗಳು ಪಾರಾಗಿದ್ದಾರೆ. ಘಟನೆ ವೇಳೆ ಆರೋಪಿಗಳನ್ನು ಬೆನ್ನಟ್ಟಿದ್ದ ಉಪ ವಲಯಾರಣ್ಯಾಧಿಕಾರಿ ಶಶಿ ಬಿದ್ದು ಕೈಗೆ ಗಾಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕರಾದ ಕಾಳೇಗೌಡ, ರವಿ, ವೀಕ್ಷಕರಾದ ಕಾರ್ಯಪ್ಪ ಹಾಗೂ ದುರ್ಗಾ ಪ್ರಸಾದ್ ಪಾಲ್ಗೊಂಡಿದ್ದರು.