ನಾಪೋಕ್ಲು, ಜ. 31: ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಸಂತಸಗೊಳ್ಳಬೇಕಾಗಿದ್ದ ಕಾಫಿ ಬೆಳೆಗಾರರು ಚಿಂತಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಾಫಿಯ ಕೊಯ್ಲು ಪೂರೈಸದಿರುವದು. ಪ್ರತಿವರ್ಷ ಜನವರಿ ಮತ್ತು ಫೆಬ್ರವರಿ ತಿಂಗಳು ಕಾಫಿ ಕೊಯ್ಲಿನ ಬಿರುಸಿನ ದಿನಗಳು. ಕಾಫಿ ಕೊಯ್ಲಾದ ಬಳಿಕ ಹೂ ಮಳೆ ಸುರಿದರೆ ಕಾಫಿಯ ಮೊಗ್ಗುಗರಳಿ ಮುಂದಿನ ವರ್ಷದ ಫಸಲು ನಿರ್ಧಾರವಾಗುತ್ತದೆ.

ಈ ಬಾರಿ ಜನವರಿ ತಿಂಗಳಲ್ಲಿ ಮಳೆಯಾಗಿದ್ದು, ತೋಟಕ್ಕೆ ತಂಪೆರೆದರೂ ಕಾಫಿ ಕೊಯ್ಯಲು ಆಗದಿರುವದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಬಹುತೇಕ ಕಡೆ ಅರ್ಧ ಭಾಗದಷ್ಟು ಮಾತ್ರ ಕೊಯ್ಲು ಪೂರೈಸಿದೆ.

ಮಳೆ ಸುರಿದಿರುವದರಿಂದ ಕೆಲವೇ ದಿನಗಳಲ್ಲಿ ಮೊಗ್ಗರಳಿ ಹೂವಾಗುವದರಿಂದ ಕಾಫಿ ಕೊಯ್ಲು ಸಾಧ್ಯವಾಗುವದಿಲ್ಲ. ಮಳೆಯಿಂದ ಹಣ್ಣಾದ ಕಾಫಿ ನೆಲಕಚ್ಚಲಿದೆ. ಜೊತೆಗೆ ದಿಢೀರ್ ಸುರಿದ ಮಳೆಗೆ ಅಂಗಳದಲ್ಲಿ, ಗದ್ದೆಗಳಲ್ಲಿ ಬೆಳೆಗಾರರ ಒಣಗಲು ಹಾಕಿರುವ ಕಾಫಿ ನೆನೆದಿರುವದರಿಂದ ಒಣಗಿಸಲು ಕಷ್ಟಕರವಾಗುತ್ತಿದೆ.

ಬಿಸಿಲಿನ ಕೊರತೆಯಿಂದ ಕೊಯ್ಲು ಮಾಡಿದ ಕಾಫಿ ಒಣಗದಿರುವದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಹೆಚ್ಚಿನ ಬೇಡಿಕೆ ಇದ್ದು, ಭಾರತದ ಕಾಫಿಗೆ ಉತ್ತಮ ದರ ಲಭಿಸಲಿದೆ. ದಿಢೀರ್ ಮಳೆ ಬೆಳೆಗಾರರಿಗೆ ನಿರಾಸೆ ತಂದಿದೆ.

- ದುಗ್ಗಳ