ಮೂರ್ನಾಡು-ಹೊದ್ದೂರು, ಡಿ. 19: ವಾರ್ಧಾ ಚಂಡಮಾರುತ ತಮಿಳುನಾಡು, ಆಂಧ್ರ ರಾಜ್ಯದ ಜನತೆಯ ಜೊತೆಗೆ ಜಿಲ್ಲೆಯ ಜನತೆಯನ್ನು ಸಂಕಟದಲ್ಲಿ ಸಿಲುಕಿಸಿದೆ.
ಒಂದೆಡೆ ಕೊಯ್ಲು ಮಾಡಿರುವ, ಕಟಾವಿಗೆ ಸಿದ್ಧವಾಗಿರುವ ಭತ್ತದ ಬೆಳೆ ಇತ್ತೀಚೆಗೆ ಸುರಿದ ತುಂತುರು ಮಳೆ ಕೃಷಿಕರನ್ನು ಕಂಗಾಲಾಗಿಸಿದೆ. ಗದ್ದೆಯಲ್ಲಿ ಕೊಯ್ಲು ಮಾಡಿದ ಬಹುತೇಕ ಕಡೆಗಳಲ್ಲಿ ನೀರು ನಿಂತಿದೆ. ಪರಿಣಾಮ ಭತ್ತವು ಗದ್ದೆಗಳಲ್ಲಿಯೇ ಮೊಳಕೆಯೊಡೆಯುವ ಸಂಭವ ಅಧಿಕವಾಗಿದೆ. ಮೂರ್ನಾಡು ವ್ಯಾಪ್ತಿಯಲ್ಲಿ ಅಲ್ಪಾವಧಿ ತಳಿಗಳ ಭತ್ತದ ಶೇ. 25 ಭಾಗ ಕಟಾವಾಗಿವೆ. ಹಲವೆಡೆಗಳಲ್ಲಿ ಇನ್ನೂ ಅವು ಗದ್ದೆಗಳಲ್ಲಿಯೇ ಇವೆ. ಬೆರಳೆಣಿಕೆಯ ಕೃಷಿಕರು ಮಾತ್ರ ಅಲ್ಪಾವಧಿ ತಳಿಗಳಾದ ಅತೀರಾ ಮತ್ತಿತರ ಬೆಳೆಗಳ ಒಕ್ಕಣೆ ಕಾರ್ಯ ಮುಗಿಸಿ, ಭತ್ತವನ್ನು ಮಾರಾಟ ಮಾಡಿದ್ದಾರೆ. ಕೆಲವರು ಹಸಿ ಹುಲ್ಲನ್ನು ಒಣಗಲು ಹರಡಿದ್ದು, ಈ ಹುಲ್ಲು ಸಹ ಮಳೆಗೆ ಸಿಕ್ಕಿ ಒದ್ದೆಯಾದ ದೃಶ್ಯ ಹಲವೆಡೆಗಳಲ್ಲಿ ಕಂಡುಬಂದಿದೆ. ಇನ್ನೂ ಶೇ. 75 ಭಾಗ ಭತ್ತದ ಬೆಳೆ ಕಟಾವಿಗೆ ಸಿದ್ಧವಾಗಿದ್ದು, ಮಳೆಯ ಪರಿಣಾಮ ಭತ್ತದ ಕೊಯ್ಲು ಇನ್ನೂ ಸುಮಾರು ಒಂದೆರಡು ವಾರ ವಿಳಂಬವಾಗುವ ಸಾಧ್ಯತೆಗಳಿವೆ. ಆದರೆ, ಉಳಿದ ಕೃಷಿಕರ ಗೋಳು ಹೇಳತೀರದಾಗಿದೆ. ಮಳೆಯಿಂದ ಒದ್ದೆಯಾಗಿರುವ ಭತ್ತವನ್ನು ಒಕ್ಕಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತ ಗದ್ದೆಯಲ್ಲಿಯೂ ಬಿಡುವಂತಿಲ್ಲ. ಮತ್ತೆ ಮಳೆ ಮರುಕಳಿಸಿದರೆ ಗತಿಯೇನು ಎಂಬ ಚಿಂತೆ ರೈತಾಪಿ ವರ್ಗವನ್ನು ಹಗಲಿರುಳು ಕಾಡುತ್ತಿದೆ. ಭತ್ತದ ಕೃಷಿಗೆ ಪೂರಕವಲ್ಲದ ಮಳೆಗಾಲದ ನಡುವೆಯೂ ಕೃಷಿಕರು ಭತ್ತವನ್ನು ಬೆಳೆದಿದ್ದರು. ಇದೀಗ ಬಂದ ಆಕಾಲಿಕ ಮಳೆ ಕೃಷಿಕರ ‘ಕೈಗೆ ಬಂದ ತುತ್ತನ್ನು ಬಾಯಿಗೆ ಬಾರದಂತೆ’ ಮಾಡಿದೆ.