ಮಡಿಕೇರಿ, ಸೆ. 12: ‘ಟಕ್ ಟಕ್ ಟಕ್ ಟಕ್ ಟಕ್ ಟಕ್ ಟಕ್ ಟಕ್’ ಎಂದು, ಶ್ರವಣಗಳಿಗೆ ವ್ಯವಸ್ಥಿತವಾದ ಇಂಪನ್ನು ನೀಡುವ ಶಬ್ಧ...ಇನ್ನು ಈ ಶಬ್ಧವನ್ನು ಆಧರಿಸಿ 60ಕ್ಕೂ ಹೆಚ್ಚು ನೌಕರರು ತಮ್ಮ ದಿನನಿತ್ಯದ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ದೃಶ್ಯ.- ಇದು ಕೆಲವು/ಹಲವು ವರ್ಷಗಳ ಹಿಂದೆ ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿರುವ ಸರ್ಕಾರಿ ಶಾಖಾ ಮುದ್ರಣಾಲಯದ ಜೀವಂತ ಸ್ಥಿತಿಯಾಗಿತ್ತು.

1956ಕ್ಕೂ ಮುನ್ನ ಪ್ರಾರಂಭಗೊಂಡ ಈ ಸರ್ಕಾರಿ ಮುದ್ರಣಾಲಯದಲ್ಲಿ ಮುಖ್ಯವಾಗಿ ಕಾನೂನು ಪುಸ್ತಕಗಳು, ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಪತ್ರಿಕೆಗಳು, ಗಜೆóಟ್ ಫಾರಂಗಳು ಮುದ್ರಣವಾಗುತ್ತಿದ್ದವು. “ಪೋಲೀಸ್ ಇಲಾಖೆಗೆ ಸಂಬಂಧಪಟ್ಟ ಪತ್ರಿಕೆಗಳು ಮುದ್ರಣವಾಗುವಾಗ ಇಡೀ ಪೋಲೀಸ್ ಹಾಗು ‘ಫಯರ್ ಇಂಜಿನ್’ ಪಡೆ ಮುದ್ರಣಾಲಯದ ಎದುರು ಜಮಾಯಿಸುತ್ತಿದ್ದರು!” ಎಂದು ಇಲ್ಲಿನ ಒಬ್ಬ ನಿವೃತ್ತ ಉದ್ಯೋಗಿ ಹೆಮ್ಮೆಯಿಂದ ಹೇಳಿಕೊಳುತ್ತಾರೆ.ಆದರೆ ಈ ಉತ್ಸಾಹ ಭರಿತ ಭವ್ಯ ಮುದ್ರಣಾಲಯದ ಧ್ವನಿ ಕ್ರಮೇಣ ಯಾರಿಗೂ ಬೇಡವಾಯಿತು. ಹಲವಾರು ಮುದ್ರಣಗಳ ಆದೇಶವನ್ನು ಪಡೆಯುತ್ತಿದ್ದ ಈ ಮುದ್ರಣಾಲಯದ ಧ್ವನಿ ಕ್ರಮೇಣ ಕ್ಷೀಣವಾಗಿ, ಈಗ ಮೂಕವಾಗಿದೆ! ಸರ್ಕಾರದ ಗಮನ ಮಡಿಕೇರಿಯ ಈ ಮುದ್ರಣಾಲಯದಿಂದ ಖಾಸಗಿ ಮುದ್ರಣಾಲಯದತ್ತ ತಿರುಗಿದರೆ, ಕೊಡಗಿನ ಜನಪ್ರತಿನಿಧಿಗಳ ಗಮನ ಇದರತ್ತ ಕನಿಷ್ಟ ಪ್ರಮಾಣದಲ್ಲೂ ತಿರುಗಲಿಲ್ಲ. ಮುದ್ರಣಾಲಯದ ಮುಖ್ಯ ಕಛೇರಿಯ ಅಧಿಕಾರಿಗಳು ಈ ಮುದ್ರಣಾಲಯಕ್ಕೆ ಪುನರ್ಜೀವ ನೀಡಲು ಬಹಳಷ್ಟು ಪ್ರಯತ್ನಿಸಿದರೂ ಇವರಿಗೆ ಕೊಡಗಿನ ಜನಪ್ರತಿನಿಧಿ üಗಳಿಂದ ಯಾವದೇ ಸಹಕಾರ ದೊರಕಲಿಲ್ಲ. ಮುದ್ರಣಾಲಯ ನಿರ್ಲಕ್ಷ್ಯಕ್ಕೆ ಒಳಗಾಯಿತು., ಹಾಗೆಯೇ ಇದರ ಟಕ್ ಟಕ್ ಶಬ್ದ ನಿಂತಿತು. ಲವಲವಿಕೆಯಿಂದಿದ್ದ 60ಕ್ಕೂ ಹೆಚ್ಚು ನೌಕರರ ಸಂಖ್ಯೆ ವರ್ಗಾವಣೆ ಹಾಗು ಇನ್ನಿತರ ಕಾರಣಗಳಿಂದ ಕೇವಲ 5ಕ್ಕೆ ಇಳಿಯಿತು. ತುಕ್ಕು ಹಿಡಿದು, ಕೆಲಸಕ್ಕಾಗಿ ಗೋಗರೆಯುತ್ತಿದ್ದ ಯಂತ್ರಗಳು ಹರಾಜಾದವು. ಕೊಬಾಲ್ಟ್ ಲೆಟರ್ ಪ್ರಿಂಟರ್ ನಂತಹ ಕೆಲವು ಯಂತ್ರಗಳು ಹರಾಜಿನಲ್ಲೂ ಸಾಗದೆ ಕಟ್ಟಡದಲ್ಲಿಯೇ ತಮ್ಮ ವೈಭವವನ್ನು ಮೌನವಾಗಿ ಪ್ರದರ್ಶಿಸುತ್ತಿವೆ. ಈಗ ಈ ಮುದ್ರಣಾಲಯ ಮೈಸೂರಿನಿಂದ ಮುದ್ರಣಗೊಂಡು ಬರುವ ಫಾರಂಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಹಾಗು ಉಡುಪಿ ಜಿಲ್ಲೆಗಳಿಗೆ ಸಾಗಾಟ ಮಾಡುವ ಕೆಲಸವಷ್ಟೇ ನಿರ್ವಹಿಸುತ್ತಿದೆ. ಇಲ್ಲಿ ಉಳಿದಿರುವ ನೌಕರರಿಗೆ ಸರಿಯಾಗಿ ಸಂಬಳ ದೊರೆಯುತ್ತಿದ್ದರೂ, ಅವರಲ್ಲಿದ್ದ ಲವಲವಿಕೆ ಮಾಯವಾಗಿದೆ.

ರಾಶಿರಾಶಿಯಲ್ಲಿ ಕಟ್ಟಿಟಿರುವ ಫಾರಂಗಳು, 5 ನೌಕರರು ಕುಳಿತುಕೊಂಡು ಇದ್ದಷ್ಟು ಕೆಲಸ ನಿರ್ವಹಿಸಲು ಜೋಡಿಸಿಟ್ಟ ಚೇರ್ ಹಾಗು ಟೇಬಲ್, ಹೊರಗೆ ಮರದ ಕೆಳಗೆ ನೇತುಹಾಕಿರುವ ಪುರಾತನ ತಗಡಿನ ನಾಮಫಲಕ. ಒಂದು ಕಟ್ಟಡಕ್ಕೆ ಸಂಪೂರ್ಣವಾಗಿ ಬೀಗ ಹಾಕಿದ್ದು, ಇನ್ನು ಉಳಿದಿರುವ ಇನ್ನೊಂದು ಕಟ್ಟಡ ತನ್ನ ಅಂತ್ಯ ಸಂಸ್ಕಾರಕ್ಕೆ ಕಾಯುತ್ತಿರು ವಂತಿದೆ. ಈ ಕಛೇರಿಗೆ ಯಾವದೇ ಹೊಸ ನೇಮಕಾತಿ ಆಗದಿರುವದು ಕಛೇರಿಯ ಅಂತ್ಯಕಾಲದ ಸಮೀಪಕ್ಕ್ಕೆ ಸಾಕ್ಷಿಯಾಗಿದೆ.

“ನಾವು ಈ ಮುದ್ರಣಾಲಯವನ್ನು ಪುನರ್ಯೌವನಗೊಳಿಸಲು ಬಹಳಷ್ಟು ಪ್ರಯತ್ನಿಸಿದೆವು. ಸುಮಾರು ಮೂರು ವರ್ಷದ ಹೋರಾಟದ ನಂತರ, ದಿಕ್ಕು ತೋಚದೆ ನಾವು ಈ ದಿಸೆಯಲ್ಲಿ ಸುಮ್ಮನಾಗಬೇಕಾಯಿತು,” ಎಂದು ಇಲ್ಲಿಯ ಫೋರ್ ಮೆನ್ ತಿಳಿಸುತ್ತಾರೆ. ಶ್ರೀಘ್ರವೇ ಈ ಮುದ್ರಣಾಲಯದ ಒಂದು ಭಾಗ ಗ್ರಂಥಾಲಯವಾಗಿ ಪುನರ್ರೂಪಗೊಳ್ಳುವ ಬಗ್ಗೆ ಸುದ್ದಿ ಕೇಳಿ ಬರುತ್ತಿದ್ದು, ಮಡಿಕೇರಿಯ ಈ ಮುದ್ರಣಾಲಯ ಕೆಲವರ ಮನಸ್ಸಿನಲ್ಲಿ ಉಳಿದುಕೊಳ್ಳುವ ಒಂದು ವ್ಯಥೆಯ ಕಥೆಯಾಗಿ ಸಾಗಬಹುದು..