ಮಡಿಕೇರಿ, ಜು. 10: ಇತ್ತೀಚೆಗೆ ಪದೇ ಪದೇ ಕೊಡಗಿನಲ್ಲಿ ಕಾಡಾನೆ ಧಾಳಿ, ಬೆಳೆ ನಾಶ, ಬೆಳೆಗಾರರ ಗೋಳಾಟ, ಮತ್ತೊಮ್ಮೆ, ಮಗದೊಮ್ಮೆ ಗುಂಡೇಟಿನಿಂದ ಆನೆಯ ಸಾವು, ತನಿಖೆ ಆರಂಭ ಮತ್ತು ಅಲ್ಲ್ಲಿಗೇ ಮುಕ್ತಾಯ. ಇದು ಕೊಡಗು ಜಿಲ್ಲೆಯ ಪ್ರಚಲಿತ ಪ್ರಮುಖ ವಿದ್ಯಮಾನ.ದಕ್ಷಿಣ ಕೊಡಗಿನಲ್ಲಿ ಹಾಗೂ ಜಿಲ್ಲೆಯ ಇತರ ತಾಲೂಕುಗಳಲ್ಲಿ ನೀವು ಕಾಲಿಟ್ಟರೆ ಪಂಚಾಯ್ತಿಯಲ್ಲಾಗಲಿ, ತೋಟ-ಅಂಗಡಿಗಳಲ್ಲಾಗಲೀ, ಇನ್ನು ಶಾಲೆಗಳಲ್ಲಾಗಲೀ ಕೇಳಿ ಬರುವ ಪ್ರಮುಖ ಸುದ್ದಿ ಆನೆಯದ್ದಾಗಿರುತ್ತದೆಯೇ ಹೊರತು ಇತರ ಐಸಿಸ್ ಧಾಳಿ, ಮೋದಿಯ ಮೋಡಿ ಮಹತ್ವ ಪಡೆದಿರುವದಿಲ್ಲ. ಒಂದು ಸಲ ರೈತನ ಸಾವಿಗೆ ಮರುಗಿದರೆ, ಇನ್ನೊಮ್ಮೆ ಆನೆಯ ಸಾವಿಗೆ ಮರುಗುತ್ತಾರೆ ಇಲ್ಲಿಯ ನಿವಾಸಿಗಳು. ಇವೆಲ್ಲವುಗಳ ಮಧ್ಯೆ ಜನರಲ್ಲಿ ಶಾಶ್ವತವಾಗಿ ಉಳಿದಿರುವ ವಿಷಯವೆಂದರೆ ಭಯಭೀತಿ ಮಾತ್ರ! ಆನೆ ಧಾಳಿಗೆ ಕಾರಣಗಳು ಹಲವಾದರೂ ಶಾಶ್ವತ ಪರಿಹಾರ ನೀಡುವವರು ಮಾತ್ರ ಶೂನ್ಯ. ನಮ್ಮ ಈ ಹಸಿರಿನ ಸಿರಿ ಎನಿಸಿಕೊಂಡಿರುವ ಕೊಡಗಿನ ಕಥೆ ಇದು; ವ್ಯಥೆಯೂ ಹೌದು!

ತಿತಿಮತಿ ವ್ಯಾಪ್ತಿಯ ಮಲ್ಲಪ್ಪ ಒಬ್ಬ ಕಾಡು ವಾಸಿ. ಸಂಜೆಗತ್ತಲಾದರೆ ಸಾಕು, ಆತನ ಮನೆಯಲ್ಲಿ ಆತಂಕದ ವಾತಾವರಣ. ನೀರು ತರಲು ಹೊರಗೆ ಹೋಗಲು ಕೂಡ ಎರಡು ಬಾರಿ ಯೋಚಿಸಬೇಕಾದ ಪರಿಸ್ಥಿತಿ. ಕೆಲವೊಮ್ಮೆ ಆತನ ಮಕ್ಕಳು ಶಾಲೆಯತ್ತ ತೆರಳಲೂ ಸಾಧ್ಯವಾಗದ ದುಸ್ಥಿತಿ. ಇವರೆಲ್ಲರೂ ಆನೆಯ ವಾಸನೆ ಗ್ರಹಿಸಿ ವಾಸ ಮಾಡುತ್ತಿರುತ್ತಾರೆ. “ನಮಗೆ ಈ ಆನೆಯ ಭೀತಿಯಿಂದ ಶಾಶ್ವತವಾದ ಪರಿಹಾರ ಬೇಕು” ಎಂಬದೇ ಈ ಮನೆಯವರು ಸರಕಾರಕ್ಕೆ ಮಾಡುವ ಮನವಿ.

ಕೊಡಗಿನಲ್ಲಿ ಆನೆ- ಮಾನವ ಸಂಘರ್ಷ 20 ವರ್ಷಗಳಿಗಿಂತಲೂ ಹಳೆಯದಾದರೂ, “ಐದಾರು ವರ್ಷಗಳಿಂದ ಈ ಸಂಘರ್ಷ ಮಿತಿ ಮೀರಿ ನಿಯಂತ್ರಣಕ್ಕೆ ಸಿಲುಕದಾಗಿದೆ.ಐದಾರು ವರ್ಷಗಳ ಹಿಂದೆ ಕಾಡಿನಲ್ಲಿ ಆನೆಗಳಿಗೆ ಪ್ರಿಯವಾದ ಬಿದಿರು ಮೆಳೆಗಳಿದ್ದವು. ಈ ಮೆಳೆಗಳಿಗೆ 60 ವರ್ಷದ ಅವಧಿಯಿರುತ್ತದೆ. ಆದರೆ, 5 ವರ್ಷಗಳ ಹಿಂದೆಯೇ ಈ 60 ವರ್ಷದ ಅವಧಿ ದಾಟಿ, ಕಾಡಿನ ಬಿದಿರುಗಳು ಒಣಗಿ ಬರಡಾಗಿವೆ. ಇದಕ್ಕೆ ಪರಹಾರೋಪಾಯವಾಗಿ ಅರಣ್ಯ ಇಲಾಖೆಯವರು ಬಿದಿರಿನ ಗಿಡಗಳನ್ನು ಪುನ: ಬೆಳೆಸುವ ಪ್ರಯತ್ನ ಮಾಡಲೇ ಇಲ್ಲ! ಇದಲ್ಲದೆ, ಕಾಡಿನಲ್ಲಿರುವ ಗಿರಿಜನರು ಹೆಚ್ಚಾಗಿ ಆನೆ ಧಾಳಿಗೆ ತುತ್ತಾಗುತ್ತಾರೆ. ಈ ವಿಷಯವಾಗಿ ಸರಕಾರವಾಗಲಿ, ಅರಣ್ಯ ಇಲಾಖೆಯಾಗಲಿ ಯಾವದೇ ಸೂಕ್ತ ಪರಿಹಾರ ಒದಗಿಸಿಕೊಟ್ಟಿಲ್ಲ. ಇನ್ನು, ಆನೆಗಳನ್ನು ತಡೆಗಟ್ಟಲು ತೆಗೆದಿರುವ ಕಂದಕಗಳು ಸರಿಯಾಗಿ ವ್ಯವಸ್ಥಿತ ರೀತಿಯಲ್ಲಿ ಆಗಿಲ್ಲ” ಎಂದು ತಿತಿಮತಿ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ ಸದಸ್ಯೆ ಪಂಕಜ ಬೇಸರ ವ್ಯಕ್ತಪಡಿಸಿದರು. ಇವರ ಪ್ರಕಾರ ಆನೆಗಳಿಗೆ

(ಮೊದಲ ಪುಟದಿಂದ) ಆಹಾರವಾದ ಹಲಸು, ಬಿದಿರು, ಬಾಳೆ, ತೆಂಗಿನ ಮರಗಳು ತೋಟಗಳಲ್ಲಿರುವವೇ ಹೊರತು ಕಾಡಿನಲ್ಲಿಲ್ಲ .

ಅಧಿಕಾರಿ ಮುಕ್ತ ಮಾತು

ಇಷ್ಟೇ ಅಲ್ಲ, ಸರಕಾರದ ಹಾಗೂ ಅರಣ್ಯ ಇಲಾಖೆಯ ಯೋಜನೆಯಿಂದ ಅಳವಡಿಸಲ್ಪಟ್ಟಿರುವ ‘ಸೋಲಾರ್’ ಬೇಲಿಗಳ ವೈಫಲ್ಯವನ್ನು ತಾವೇ ಪ್ರತ್ಯಕ್ಷ ಸಾಕ್ಷೀಕರಿಸಿವೆ. ಅರಣ್ಯ ಇಲಾಖೆ ಈ ಮಾನವ- ಆನೆ ಸಂಘರ್ಷದ ಬಗ್ಗೆ ಮೌನವಾಗಿದೆಯೇ? ಇಲ್ಲ ಕ್ರಮ ಕೈಗೊಳ್ಳುತ್ತಿದೆಯೇ? ಇದಕ್ಕೆ ಉತ್ತರವಾಗಿ ಜಿಲ್ಲೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೀಗೆ ಹೇಳುತ್ತಾರೆ:- “ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವೆಂದರೆ ಆನೆ ದಾಟುವ ಜಾಗಗಳನ್ನು ಸಂಪೂರ್ಣ ಮುಚ್ಚುವದು. ಇಲಾಖೆಯಿಂದ ಈ ಸಂಬಂಧ ಸರಕಾರಕ್ಕೆ ರೂ. 270 ಕೋಟಿ ಯೋಜನೆಯ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಈ 270 ಕೋಟಿಯಲ್ಲಿ ಕೇವಲ ರೂ. 5 ಕೋಟಿ ಮಾತ್ರ ಈವರೆಗೆ ಬಿಡುಗಡೆಗೊಂಡಿದೆ. ಕೊಡಗಿನ ಹಸಿರು ವನ ಸಾಲಿನ ಹೊದಿಕೆ ಇತ್ತೀಚೆಗೆ ಅಧಿಕಗೊಳ್ಳುತ್ತಿರುವ ರಿಸಾರ್ಟ್ ಸಂಸ್ಕøತಿ ಹಾಗೂ ಹಿತಾಸಕ್ತ ಜನರ ಧನದಾಹದಿಂದಾಗಿ ಕ್ಷೀಣಿಸುತ್ತಲೇ ಬರುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕ್ಷೀಣಿಸುತ್ತಿರುವ ವನ ರಾಶಿ ಕೂಡ ಆನೆ- ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ಇದಲ್ಲದೆ, ಅರಣ್ಯ ನಾಶ ತಡೆಗಟ್ಟಲು ಅವಶ್ಯಕ ಸಿಬ್ಬಂದಿಯ ಕೊರತೆಯಿದ್ದು, ಇಲಾಖೆಯಲ್ಲಿ ಶೇಕಡ 60 ರಷ್ಟು ನೇಮಕಾತಿಯಾಗದೆ ಹುದ್ದೆಗಳು ಖಾಲಿ ಬಿದ್ದಿವೆ. ಇವೆಲ್ಲ ಕಾರಣದಿಂದ ಅರಣ್ಯ ಇಲಾಖೆಯು ಜನರ ಹಾಗೂ ಸರಕಾರದ ನೆರವಿಲ್ಲದೆ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಇದಕ್ಕಾಗಿಯೇ ಅರಣ್ಯ ಇಲಾಖೆಯೊಂದಿಗೆ ಟಾಟಾ ಕಾಫಿ ಸಂಸ್ಥೆ ಕೈ ಜೋಡಿಸಿದೆ. ಸಂಸ್ಥೆಯ ಸಮಾರು 45 ಸಿಬ್ಬಂದಿಯನ್ನು ಆನೆಗಳನ್ನು “ಟ್ರ್ಯಾಕ್” ಮಾಡುವ ಕಾರ್ಯಕ್ಕಾಗಿ ನಿಯೋಜಿಸಿ ಇಲಾಖೆಯೊಂದಿಗೆ ಸಹಕರಿಸುತ್ತಿದೆ.

ಎಸ್.ಎಂ.ಎಸ್. ಜಾಗೃತಿ

“ನಾನು ಆನೆಗಳ ನಡೆ-ವರ್ತನೆ-ಜೀವನ ಕ್ರಮದ ಬಗ್ಗೆ ನಿಕಟವಾಗಿ ಅಧ್ಯಯನ ಮಾಡಿದ್ದೇನೆ. ನನ್ನ ಅಧ್ಯಯನದಿಂದ ಕಂಡುಕೊಂಡಂತೆ ಕೊಡಗಿನಲ್ಲಿ ಆನೆಗಳ ಎರಡು ರೀತಿಯ ಜೀವನ ಶೈಲಿ ಕಂಡುಬರುತ್ತದೆ. ಒಂದೆಡೆಯೇ ನೆಲೆಸುವ ನಿವಾಸಿ (ಹೆಚ್ಚಾಗಿ ತೋಟಗಳಲ್ಲಿಯೇ ಬೀಡು ಬಿಟ್ಟಿರುತ್ತವೆ) ಅನೆಗಳಿದ್ದರೆ ಮತ್ತೊಂದೆಡೆ ಕಾಡಿನಿಂದ ನಾಡಿನೆಡೆಗೆ ವಲಸೆ ಬರುವ ಗುಂಪಿನ ಆನೆಗಳಿವೆ. ನಾವು ಈ ಎರಡೂ ರೀತಿಯ ಜೀವನ ಶೈಲಿಯ ಆನೆಗಳ ಮೇಲೆ ಗಮನವಿಟ್ಟು ‘ಅಲರ್ಟ್ ಸಿಸ್ಟಂ’ ಒಂದನ್ನು ಯೋಜಿಸಿದ್ದೇವೆ. ಆನೆಗಳನ್ನು ‘ಟ್ರ್ಯಾಕ್’ ಮಾಡಿ ಅವುಗಳ ಚಲನ ವಲನಗಳ ಕುರಿತು ಸನಿಹದ ತೋಟಗಳ ಮಾಲೀಕರು ಹಾಗೂ ಕಾರ್ಮಿಕರಿಗೆ ಎಸ್.ಎಂ.ಎಸ್. ಮೂಲಕ ಮುನ್ನೆಚ್ಚರಿಕೆ ನೀಡಿ ಜಾಗೃತಿಗೊಳಿಸುತ್ತೇವೆ. ಆ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ಪೂರ್ವಭಾವಿಯಾಗಿಯೇ ತಡೆಗಟ್ಟಲು ಅರಣ್ಯ ಇಲಾಖೆಯೊಂದಿಗೆ ಸಹಕರಿಸುತ್ತೇವೆ” ಎಂದು ಟಾಟಾ ಸಂಸ್ಥೆಯ ವನ್ಯ ಜೀವಿ ಸಂಯೋಜಕರಾದ ಕಾರ್ತಿಕ್ ವಿವರಿಸಿದರು.

ಆದರೆ, ಇದು ಶಾಶ್ವತ ಪರಿಹಾರವೇ? ಇಲ್ಲ ;ಇದಕ್ಕೆ ಇನ್ನೂ ಉತ್ತರ ತಿಳಿಯದು. ಈ ಆನೆ-ಮಾನವ ಸಂಘರ್ಷ ಸಂಬಂಧ ಹಲವಾರು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳಲ್ಲಿ ಕೆಲವು ಶಾಶ್ವತ ಪರಿಹಾರದ ಕುರಿತಾಗಿ ಸಲಹೆಗಳೂ ಮೂಡಿಬಂದಿವೆ. ಆದರೆ, ಈ ಪರಿಹಾರಗಳು ಕೇವಲ ಪುಸ್ತಕದ ಹಾಳೆಗಳನ್ನು ಮಾತ್ರ ತಲುಪಿವೆ. ಇದಕ್ಕೆ ಕಾರಣವನ್ನು ಕೇವಲ ಊಹಿಸಲಾಗಬಹುದೇ ಹೊರತು ಸ್ಪಷ್ಟವಾಗಿ ಇಂಥದ್ದೇ ಎಂದು ಹೇಳಲು ಯಾರಿಗೂ ಧೈರ್ಯವಿಲ್ಲ! ಸರಕಾರದ ಪ್ರಮುಖ ಯೋಜನೆ ಆನೆ ಧಾಳಿಗೆ ತುತ್ತಾದವರಿಗೆ ಕನಿಷ್ಟ ಪ್ರಮಾಣದ ಪರಹಾರ ನೀಡುವದೇ ಹೊರತು ಕಾಡನ್ನು ಆನೆಗಳಿಗೆ ಸೂಕ್ತವಾದ ವಾಸ ಪ್ರದೇಶವನ್ನಾಗಿ ಮಾಡುವ ಯೋಜನೆಯಂತೂ ಖಂಡಿತ ಇದುವರೆಗೂ ರೂಪುಗೊಂಡಿಲ್ಲ, ಜಾರಿಗೊಂಡಿಲ್ಲ.ತೇಗದ ಮರದಿಂದ ಬರುವ ಅಧಿಕ ಆದಾಯಕ್ಕೂ , ಬಾಳೆ- ಹಲಸುವಿನಂತಹ ಮರಗಳಿಂದ ದೊರಕುವ ಲಾಭಕ್ಕೂ ಅಜಗಜಾಂತರ ವ್ಯತ್ಯಾಸವಿದೆಯಲ್ಲವೇ? ಈ ಹಿಂದೆ ಕೇವಲ ಆದಾಯದ ದೃಷ್ಟಿಕೋನದಿಂದ ಅರಣ್ಯ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ತೇಗದ ಗಿಡಗಳನ್ನು ನೆಡಲಾಯಿತು. ಗಿಡಗಳು ಬೆಳೆದು ಮರಗಳಾಗಿ ಆನೆಗಳಿಗೆ ಆಹಾರವಾಗಬೇಕಾದ ಇತರ ಗಿಡ ಮರಗಳು, ಬಿದಿರು ಮೆಳೆಗಳ ಬೆಳವಣಿಗೆಯನ್ನು ನುಂಗಿ ಹಾಕಿದವು.ಇಲಾಖೆಯ ತಪ್ಪು ಹೆಜ್ಜೆಯಿಂದಾಗಿ ಕಾಡಿನಲ್ಲಿ ಆನೆಗಳಿಗೆ ಅಗತ್ಯ ಆಹಾರ ದೊರಕದೆ ನಾಡಿಗೆ ಲಗ್ಗೆಯಿಡುತ್ತಿವೆ ಎಂಬದು ಕೆಲವು ಅನುಭವಸ್ಥರ ನುಡಿ. ಇನ್ನಾದರೂ ಸರಕಾರ- ಅರಣ್ಯ ಇಲಾಖೆ ಜಾಗೃತವಾಗಿ ತೇಗದ ಮರಗಳನ್ನು ತೆಗೆದು ಆನೆಗಳಿಗೆ ಆಹಾರವಾಗುವ ವನ್ಯರಾಶಿಯನ್ನು ಬೆಳೆಸಲಿ. ಅದರೊಂದಿಗೆ ವನ್ಯ ಪ್ರದೇಶದಲ್ಲಿ ಅಲ್ಲಲ್ಲಿ ನೀರಿನ ಸಂಗ್ರಹಾಗಾರಗಳನ್ನು ನಿರ್ಮಿಸಿ ಆನೆಗಳ ದಾಹ ನೀಗಿಸಲಿ. ಆ ಮೂಲಕ ಆನೆ- ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಲಿ ಎಂಬದು ಈ ಮಂದಿಯ ಅಂತರಾಳದ ಬಿನ್ನಹ.

ಬೆಳೆಗಾರರ ಅನಿವಾರ್ಯ ಸ್ಥಿತಿ

“ಸರಕಾರದ ಎಲ್ಲ ಕಪಟ ಭರವಸೆಗಳ ನಡುವೆ ಸಿಲುಕಿ ನಜ್ಜುಗುಜ್ಜಾಗುತ್ತಿರುವವರು ಬೆಳೆಗಾರರು, ಕಾರ್ಮಿಕರು ಮಾತ್ರ. “ಸರಕಾರದ ಗಮನ ಈ ವಿಷಯದೆಡೆ ತೀವ್ರವಾಗಿ ಹರಿಯಬೇಕೆನ್ನುವ ಉದ್ದೇಶಕ್ಕಾಗಿ ಆನೆಗಳನ್ನು ಹತ್ಯೆಗೈಯ್ಯಬೇಕೆನ್ನುವ ಕಲ್ಪನೆಯನ್ನು ಕೆಲವರು ಮಂದಿಟ್ಟಿದ್ದಾರೆಯೇ ಹೊರತು ಅವರಿಗೆ ಈ ಮೂಕ ಪ್ರಾಣಿಯನ್ನು ಕೊಲ್ಲುವ ಇಚ್ಛೆಯಾಗಲಿ ಅಥವ ಅಂತಹ ಕಠೋರ ಮನಸ್ಸಾಗಲಿ ಇಲ್ಲ” ಎಂದು ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ವಸಂತ್ ಪೊನ್ನಪ್ಪ, ಆನೆ ಧಾಳಿಗೆ ಒಳಗಾದ ಹಲವಾರು ತೋಟ ಮಾಲೀಕರ ಪೈಕಿ ಒಬ್ಬರು. ಅವರು ಇಲಾಖೆಯಿಂದ ತೆಗೆಯಲ್ಪಟ್ಟಿರುವ ಕಂದಕಗಳ ಬಗ್ಗೆ ತಿಳಿಸುತ್ತ “ ನಾನು ಖುದ್ದಾಗಿ ಮೂವರು ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕಾಡಿಗೆ ಕರೆದೊಯ್ದು, ಅಲ್ಲಿ ಆನೆಗಳಿಗಿರುವ ಆಹಾರವನ್ನು ತೋರಿಸುವಂತೆ ಕೇಳಿರುವೆ. ಕೊಡಗಿನ ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ತೇಗದ ಮರಗಳಿವೆಯೇ ಹೊರತು ಬೇರೇನೂ ಇಲ್ಲ. ಕೆಲವು ವರ್ಷಗಳ ಹಿಂದೆ ನಾನು ನಮ್ಮ ತೋಟದಲ್ಲಿ ಬೆಳೆಯುವ ಹಲಸಿನ ಹಣ್ಣುಗಳ ಬೀಜಗಳನ್ನು ಗೋಣಿಯಲ್ಲಿ ಸಂಗ್ರಹಿಸಿ ಇಲಾಖೆಗೆ ನೀಡಿ ಕಾಡಿನಲ್ಲಿ ಬಿತ್ತ್ತುವಂತೆ ಕೋರಿದ್ದೆ. ಆದರೆ ಇದು ಕೂಡ ನೆರವೇರಲಿಲ್ಲ. ಈಗ ಈ ಸಂಘರ್ಷ ಗಂಟಲವರೆಗೆ ತಲುಪಿ ನುಂಗಲಾರದ ತುತ್ತಿನಂತಾಗಿದೆ; ಪರಿಹಾರ ಮಾಡಲಾಗದಷ್ಟು ಕಗ್ಗಂಟಾಗಿ ಪರಿಣಮಿಸಿ ಹೀನಾಯ ಸ್ಥಿತಿ ತಲುಪಿದೆ” ಎಂದು ಅವರು ಆತಂಕ ಪಟ್ಟರು.

ಸಾವು-ನೋವು;ಕಷ್ಟ-ನಷ್ಟ

2015-16 ರ ಸಾಲಿನಲ್ಲಿ ಜಿಲ್ಲೆಯಲ್ಲಿ ಇದುವರೆಗಿನ ಅಂಕಿಅಂಶದಂತೆ 13 ಮಾನವ ಸಾವು, 10 ಕ್ಕೂ ಹೆಚ್ಚು ಆನೆಗಳ ಸಾವು, ಲಕ್ಷಾಂತರ ರೂ. ಆಸ್ತಿ-ಪಾಸ್ತಿ ನಷ್ಟವಾದರೂ ಇದುವರೆಗೆ ಭರವಸೆಯ ಹೊರತು ಸಮರ್ಪಕ ಪರಿಹಾರ ದೊರಕದ ಬೆಳೆಗಾರರು ನಿತ್ಯವೂ ಆತಂಕ_ ಭಯದಿಂದ ದಿನ ಕಳೆಯುತ್ತಿದ್ದಾರೆ. ಮೂಕ ಪ್ರಾಣಿಗಳಾದ ಆನೆಗಳು ಆಹಾರವನ್ನು, ನೀರನ್ನು ಅರಸುತ್ತ ತೋಟಗಳ ಕಡೆ ವಾಲುತ್ತಿದ್ದು ಬೆಳೆಗಾರರು ಅವರ ತೋಟಗಳನ್ನು ನಾಶವಾಗದ ಹಾಗೆ ರಕ್ಷಿಸಿಕೊಳ್ಳಲು ನಿತ್ಯ ಹೆಣಗಾಡುತ್ತಿದ್ದಾರೆ. ಇವರ ನಿತ್ಯದ ಬದುಕು ದುರ್ಭರವೆನಿಸುತ್ತಿದೆ. ಈ ಆನೆಗಳಿಗೆ ಸಮರ್ಪಕ ವ್ಯವಸ್ಥೆಯೊಂದಿಗೆ ವನ್ಯ ಪ್ರದೇಶದಲ್ಲಿ ನೆಲೆಕೊಡುವವರು ಹಾಗೂ ಬೆಳೆಗಾರರಿಗೆ ಪರಿಹಾರ ಕೊಡುವವರಾರು? ಕುರುಕ್ಷೇತ್ರ ಸಮರದಂತೆ ಕೆಲವರ ಬಲಿಯೇ ಇದಕ್ಕೆ ಪರಿಹಾರವೇ? ಯಕ್ಷ ಪ್ರಶ್ನೆಗೆ ಉತ್ತರ ದೊರೆತರೂ ಈ ಆನೆ- ಮಾನವ ಸಂಘರ್ಷದ ಪರಿಹಾರ ಮಾರ್ಗದ ಪ್ರಶ್ನೆಗಳಿಗೆ ಉತ್ತರ ಸಿಗುವದು ಕಷ್ಟಸಾಧ್ಯವೆನಿಸುತ್ತಿದೆ.

ನಾಟಕೀಯತೆ ನಿಲ್ಲಿಸಲಿ

ಆನೆಗಳಿಗೆ ಕಾಡಿನಲ್ಲಿ ತಿನ್ನಲು ಏನೂ ಇಲ್ಲ. ಅವುಗಳ ಬೃಹತ್ ಉದರಂಭರಣೆಗಾಗಿ ಅನ್ಯ ಮಾರ್ಗಕ್ಕೆ ಇಳಿಯುವ ಅನಿವಾರ್ಯತೆ ತಲೆದೋರುತ್ತದೆ. ಅವು ಅಸಹಾಯಕತೆಯಿಂದ ತೋಟದೊಳಗೆ ತಿನ್ನಲು ಆಹಾರ ಹುಡುಕಿಕೊಂಡು ಬರುತ್ತವೆ. ಕಾಡಿನಲ್ಲಿ ಈ ಪ್ರಾಣಿಗಳಿಗೆ ಸರಿಂಯಾದ ತಿನ್ನುವ ವ್ಯವಸ್ಥೆಯನ್ನು ಅರಣ್ಯ ಇಲಾಖೆಯವರು ಮಾಡಬೇಕು. ಸರ್ಕಾರ ಆನೆ ಧಾಳಿಯಿಂದ ಸತ್ತವರಿಗೆ ಪರಿಹಾರವೆಂದು ನೀಡುವದು ಒಂದು ಮಾದರಿಯ ತಮಾಷೆಯಾಗಿಬಿಟ್ಟಿದೆ. ಸರ್ಕಾರ ನಾಟಕೀಯತೆ ನಿಲ್ಲಿಸಿ ಸರಿಯಾದ, ಶಾಶ್ವತವಾದ ಪರಿಹಾರ ಒದಗಿಸಿಕೊಡಬೇಕು ಎಂದು ಕಾಡ್ಯಮಾಡ ಗಿರೀಶ್‍ಗಣಪತಿ ಹಾಗು ರೀತು ಗಣಪತಿ ದಂಪತಿ ಅಭಿಪ್ರಾಯಪಟ್ಟರು.