ಸೋಮವಾರಪೇಟೆ, ಜ. 2: ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರಂಭಿಕ ಹಂತದ ರೂ. 50 ಸಾವಿರ ಚೆಕ್ಕ್ ಅನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ವಿತರಿಸಿದರು. ಕುಶಾಲನಗರ ಹೋಬಳಿ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಕುಳ್ಳಯ್ಯ ಎಂಬವರ ಪುತ್ರ ಹೆಚ್.ಕೆ. ಮೂರ್ತಿ ಎಂಬ ಯುವಕ ಸುಳ್ಯ ತಾಲೂಕಿನ ವಿಜಯ ಪೂಜಾರಿ ಎಂಬವರ ಪುತ್ರಿ ಧನಲಕ್ಷ್ಮೀ ಎಂಬ ಯುವತಿಯನ್ನು ವಿವಾಹವಾಗಿದ್ದರು. ಚೆಕ್ ವಿತರಣೆ ಸಂದರ್ಭ ತಾ. ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.