ಕುಶಾಲನಗರ, ನ. 29: ಕುಶಾಲನಗರ ಗುಡ್ಡೆಹೊಸೂರು ಬಳಿಯ ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 23 ಮತ್ತು 24 ರಂದು ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ ಎಂದು ಐಶ್ವರ್ಯ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ತಿಳಿಸಿದ್ದಾರೆ.
ಅವರು ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಐಶ್ವರ್ಯ ವಿದ್ಯಾ ಪ್ರತಿಷ್ಠಾನ ಪ್ರಾಯೋಜಿತ 6ನೇ ವರ್ಷದ ಈ ಪಂದ್ಯಾವಳಿಯಲ್ಲಿ ಅಂದಾಜು 35 ರಿಂದ 40 ಕಾಲೇಜುಗಳ ತಂಡ ಭಾಗವಹಿಸುವ ನಿರೀಕ್ಷೆಯಿದೆ. ಪ್ರಥಮ ಅಥವಾ ದ್ವಿತೀಯ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಹಾಗೂ ಸಾಮರಸ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ಪ್ರತಿಷ್ಠಾನ ನೀಡುವ ಉದ್ದೇಶ ಹೊಂದಿದ್ದು, ವಿಜೇತ ತಂಡಗಳಿಗೆ ರೂ. 10 ಸಾವಿರ, 7,500 ಮತ್ತು ತೃತೀಯ ತಂಡಕ್ಕೆ 5 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರದೊಂದಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು ಎಂದು ತಿಳಿಸಿದ್ದಾರೆ. ಐಶ್ವರ್ಯ ಸ್ವತಂತ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ ಕಳೆದ ಸಾಲಿನಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿರುವದಾಗಿ ಮಾಹಿತಿ ನೀಡಿದರು.
ಕಾಲೇಜಿನ ತಂಡಗಳು ಶಾಲಾ ಮುಖ್ಯಸ್ಥರ ಶಿಫಾರಸ್ಸು ಪತ್ರದೊಂದಿಗೆ ಡಿಸೆಂಬರ್ 15ರ ಒಳಗೆ ನೊಂದಾಯಿಸುವಂತೆ ಕೋರಿದ್ದಾರೆ. ಸ್ಪರ್ಧಾಳುಗಳಿಗೆ ಯಾವದೇ ರೀತಿಯ ಪ್ರವೇಶ ಶುಲ್ಕ ಇರುವದಿಲ್ಲ. ಉಚಿತ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವದಾಗಿ ತಿಳಿಸಿರುವ ಕಾಲೇಜು ಪ್ರಾಂಶುಪಾಲರಾದ ಜೋಯಪ್ಪ ಹೆಚ್ಚಿನ ಮಾಹಿತಿಗಾಗಿ 08276-279140, 9880382259 ಅಥವಾ 9483843189 ಸಂಪರ್ಕಿಸುವಂತೆ ಕೋರಿದ್ದಾರೆ.
ಗೋಷ್ಠಿಯಲ್ಲಿ ಹಿರಿಯ ಪ್ರಾಧ್ಯಾಪಕ ನವೀನ್ ಇದ್ದರು.