ಸೋಮವಾರಪೇಟೆ, ಜೂ. 19: ದೇಶದ ಮೂಲ ಸಂಸ್ಕøತಿಯ ಪ್ರತೀಕವಾಗಿರುವ ಯೋಗಕ್ಕೆ ವಿಶ್ವ ಮನ್ನಣೆ ದೊರಕಿರುವ ಪ್ರಸ್ತುತತೆಯಲ್ಲಿ ಎರಡನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಸೋಮವಾರಪೇಟೆಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.
ನಿರಂತರ ಯೋಗ ಕೇಂದ್ರ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಕೇಂದ್ರದ ವತಿಯಿಂದ ಪ್ರತ್ಯೇಕವಾಗಿ ಯೋಗ ದಿನಾಚರಣೆಯನ್ನು ಆಯೋಜಿಸಿದ್ದು, ತಾ. 21 ರಂದು (ನಾಳೆ) ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಗರದ ಮೂರು ಸ್ಥಳಗಳಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಯಲಿದೆ.
ಇಲ್ಲಿನ ನಿರಂತರ ಯೋಗ ತರಬೇತಿ ಕೇಂದ್ರದ ವತಿಯಿಂದ ರೋಟರಿ, ಜೇಸೀ ಸಂಸ್ಥೆ, ಅಕ್ಕನಬಳಗ, ವಿಶ್ವ ಹಿಂದೂ ಪರಿಷತ್, ಜಾಗರಣಾ ವೇದಿಕೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಸ್ಥಳೀಯ ಕೊಡವ ಸಮಾಜದಲ್ಲಿ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಯೋಗ ದಿನಾಚರಣೆ ನಡೆಯಲಿದೆ ಎಂದು ನಿರಂತರ ಯೋಗ ಕೇಂದ್ರದ ಗಣೇಶ್ ತಿಳಿಸಿದ್ದಾರೆ.
ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರೋಟರಿ ಸಂಸ್ಥೆಯ ಮೋಹನ್ ರಾಮ್, ವೈದ್ಯರುಗಳಾದ ಜಶ್ವಂತ್, ಶರತ್‍ಬಾಬು ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯೋಗ ಗುರು ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಘಟಕದ ವತಿಯಿಂದ ತಾ. 21 ರಂದು ಬೆಳಿಗ್ಗೆ 6 ಗಂಟೆಯಿಂದ 7.30 ರವರೆಗೆ ಇಲ್ಲಿನ ಮಾನಸ ಸಭಾಂಗಣದಲ್ಲಿ ಯೋಗ ದಿನಾಚರಣೆ ನಡೆಯಲಿದೆ.
ಆರ್ಟ್ ಆಫ್ ಲಿವಿಂಗ್, ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ, ತಾಲೂಕು ಯುವ ಒಕ್ಕೂಟ, ಎಬಿವಿಪಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಕುಮ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮಾನಸ ಸಭಾಂಗಣದ ಮಾಲೀಕ ಶ್ರೀಧರ್ ಉದ್ಘಾಟಿಸಲಿದ್ದಾರೆ. ರೊಟೇರಿಯನ್ ಬಿ.ಎಸ್. ಸದಾನಂದ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ. ಪ್ರಕಾಶ್, ಯುವ ಒಕ್ಕೂಟದ ಅಧ್ಯಕ್ಷ ದಿವಾಕರ್, ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕ ದೀಪಕ್ ಉಪಾಧ್ಯ ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಯೋಜಕಿ ರಾಗಿಣಿ ತಿಳಿಸಿದ್ದಾರೆ.
ಇಲ್ಲಿನ ಪತಂಜಲಿ ಯೋಗ ಕೇಂದ್ರದ ವತಿಯಿಂದ ಪಟ್ಟಣದ ಬೇಳೂರು ರಸ್ತೆಯಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಅಂದು ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸಾಮೂಹಿಕವಾಗಿ ಯೋಗ ಮಾಡುವ ಮೂಲಕ ದಿನಾಚರಣೆಯನ್ನು ಆಚರಿಸಲಾಗುವದು ಎಂದು ಪತಂಜಲಿ ಕೇಂದ್ರ ಚಂದ್ರಪ್ಪ ಮಾಸ್ತರ್ ತಿಳಿಸಿದ್ದಾರೆ. ತಹಶೀಲ್ದಾರ್ ಶಿವಪ್ಪ, ಲೋಕಾಯುಕ್ತ ಮಾಜಿ ಎಸ್.ಪಿ. ಶಿವಮೂರ್ತಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.