ಮಡಿಕೇರಿ, ಜ. 19: ಜಿಲ್ಲೆಯಲ್ಲಿನ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಎಂಎಸ್‍ಪಿಟಿಸಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪೂರಕ ಪೌಷ್ಟಿಕ ಆಹಾರ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡದಿದ್ದಲ್ಲಿ ಎಂ.ಎಸ್.ಪಿ.ಟಿ.ಸಿ. ಸಂಸ್ಥೆಯಿಂದ ಪೂರೈಸುವ ಆಹಾರ ಪದ್ಧತಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಮಹಿಳಾ ಸ್ವಸಹಾಯ ಗುಂಪುಗಳಿಗೆ ಅವಕಾಶ ಮಾಡಬೇಕು ಎಂಬದು ಸರ್ಕಾರದ ಆಶಯವಾಗಿದೆ. ಆದರೆ ಇದನ್ನೇ ದುರುಪ ಯೋಗಪಡಿಸಿಕೊಂಡರೆ ಸಹಿಸಿಕೊಳ್ಳಲು ಅಸಾಧ್ಯ. ಮಕ್ಕಳಿಗೆ ಪೂರೈಕೆಯಾಗುವ ಆಹಾರ ಪದಾರ್ಥದಲ್ಲಿ ರಾಜಿ ಪ್ರಶ್ನೆಯಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಂ.ಎಸ್.ಪಿ.ಟಿ.ಸಿ. ಸಂಸ್ಥೆಗಳು ಆದಾಯದಲ್ಲಿ ನಡೆಯಬೇಕು. ಆದರೆ ಸಾಲದಲ್ಲಿ ನಡೆಯುತ್ತಿವೆ ಎಂದರೆ ಹೇಗೆ ಎಂದು ಜಿಲ್ಲಾಧಿಕಾರಿ ಅವರು ಅತೃಪ್ತಿ ವ್ಯಕ್ತಪಡಿಸಿದರು.

ಎಂ.ಎಸ್.ಪಿ.ಟಿ.ಸಿ. ಸಂಸ್ಥೆಗಳು ಸರ್ಕಾರದ ನಿರ್ದೇಶನದಂತೆ ಪೂರಕ ಪೌಷ್ಟಿಕ ಆಹಾರ ಸರಬರಾಜು ಮಾಡದಿದ್ದಲ್ಲಿ, ಟೆಂಡರ್ ಆಹ್ವಾನಿಸಿ ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಸರಬರಾಜು ಮಾಡ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳಿಗೆ ಇಷ್ಟವಾಗಿರುವ ಆಹಾರವನ್ನು ನೀಡಬೇಕು. ಸರ್ಕಾರ ಒದಗಿಸುವ ಪೂರಕ ಪೌಷ್ಟಿಕ ಆಹಾರ ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಅವರು ಜಿಲ್ಲಾ ಮಟ್ಟದ ಪೂರಕ ಪೌಷ್ಟಿಕ ಆಹಾರ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಹಲವು ಮಾಹಿತಿ ನೀಡಿದರು.

ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಸಾಗಣೆ ಮಾಡುವ ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಾದ ದಮಯಂತಿ ಇತರರು ತಮ್ಮ ವ್ಯಾಪ್ತಿಯಲ್ಲಿ ಎಂ.ಎಸ್.ಪಿ.ಟಿ. ಸಿ.ಯಿಂದ ಗುಣಮಟ್ಟದ ಆಹಾರ ಪೂರೈಯಾಗುತ್ತದೆ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸಿ. ನಾಗರಾಜು, ಸಹಕಾರ ಸಂಘಗಳ ಉಪ ನಿಬಂಧಕರಾದ ವಿಜಯ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ರವೀಂದ್ರ, ಎಂ.ಎಸ್.ಪಿ.ಟಿ.ಸಿ. ಸಂಸ್ಥೆಯ ಪ್ರತಿನಿಧಿಗಳು ಹಲವು ಮಾಹಿತಿ ನೀಡಿದರು.

ಎಂ.ಎಸ್.ಪಿ.ಟಿ.ಸಿ. ಘಟಕದಲ್ಲಿ ಪ್ಲೋರ್ ಮಿಲ್‍ಗಳನ್ನು ಅಳವಡಿಸಿ ಸಾಂಬಾರು ಪೌಡರನ್ನು ಘಟಕದಲ್ಲಿಯೇ ತಯಾರಿಸಬೇಕು. ಎಂ.ಎಸ್.ಪಿ.ಟಿ.ಸಿ. ಘಟಕದಿಂದ ಸರಬರಾಜು ಆಗುವ ಆಹಾರ ಪದಾರ್ಥಗಳ ಪ್ರತೀ ಪ್ಯಾಕೆಟಿನ ಮೇಲೆ ಉಪಯೋಗಿಸಲು ಕೊನೆಯ ದಿನಾಂಕ ಮತ್ತು ವೆಜ್ ಲೋಗೋವನ್ನು ಕಡ್ಡಾಯವಾಗಿ ನಮೂದಿಸುವದು.

ಅಂಗನವಾಡಿಯಿಂದ ವಿತರಿಸುವ ಆಹಾರ ಪದಾರ್ಥಗಳನ್ನು ಒಂದೇ ಮಾಸ್ಟರ್ ಬ್ಯಾಗ್‍ನಡಿ ಹಾಕಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರಾಯೋಗಿಕವಾಗಿ ಒಂದು ವೃತ್ತವನ್ನು ಆಯ್ಕೆ ಮಾಡಿ ನಿರ್ವಹಿಸುವದು.

ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳನ್ನು ಶೀಲ್ಡ್ ಕವರ್‍ನಲ್ಲಿ ಸರಬರಾಜು ಮಾಡುವದು. ಅಂಗನವಾಡಿ ಕೇಂದ್ರಗಳಿಗೆ ಡಬ್ಬಲ್ ಫಾರ್ಟಿ ಪೈಡ್ ಉಪ್ಪನ್ನು ಖರೀದಿಸಿ ನೀಡುವದು. 2017-18ನೇ ಸಾಲಿಗೆ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಸಾಗಾಣಿಕೆದಾರರನ್ನು ಆಯ್ಕೆ ಮಾಡಲು ಇ-ಟೆಂಡರ್ ಆಹ್ವಾನಿಸಿ ಆಯ್ಕೆ ಮಾಡುವ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕ್ರಮವಹಿಸುವದು. ಐ.ಸಿ.ಡಿ.ಎಸ್. ಫಲಾನುಭವಿಗಳ ಮೆನು ಮತ್ತು ಆಹಾರ ಪದಾರ್ಥಗಳ ದರ ನಿಗದಿ, ಅಪೌಷ್ಟಿಕ ಮಕ್ಕಳಿಗೆ ನೀಡುತ್ತಿರುವ ಕೋಳಿ ಮೊಟ್ಟೆ ದರ ನಿಗದಿ ಮತ್ತಿತರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿನ ಹೆಚ್.ಐ.ವಿ. ಹಾಗೂ ಏಡ್ಸ್ ಸೋಂಕಿತ ಮಹಿಳೆಯರಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಸಾವಿರ ರೂ. ಸಹಾಯ ಧನ ಹಾಗೂ ಶೇ. 4 ರಷ್ಟು ಬಡ್ಡಿ ದರದಲ್ಲಿ 40 ಸಾವಿರ ರೂ. ಸಾಲವನ್ನು ನೀಡಲಾಗುತ್ತಿದ್ದು, ಅರ್ಹರು ಈ ಸೌಲಭ್ಯ ಪಡೆಯುವಂತೆ ಜಿಲ್ಲಾಧಿಕಾರಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಜಿಲ್ಲೆಯಲ್ಲಿ 10 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದು, ಈಗಾಗಲೇ ಆರು ಮಂದಿಗೆ ಸೌಲಭ್ಯ ನೀಡಲಾಗಿದೆ. ಉಳಿದ ನಾಲ್ಕು ಮಂದಿಗೆ ಸೌಲಭ್ಯವನ್ನು ಕಲ್ಪಿಸಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್. ಶ್ರೀರಂಗಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಬಿ.ಬಿ. ಸಾವಿತ್ರಿ, ಒಡಿಪಿ ಸಂಸ್ಥೆಯ ಜಾಯ್ಸ್ ಮೇನೆಜಸ್, ಸುನಿತಾ, ಸತ್ಯಭಾಮ, ಜಯಂತಿ, ಪ್ರಭಾವತಿ, ಪ್ರಿಯಾ ಇತರರು ಇದ್ದರು.