ಮಡಿಕೇರಿ, ಅ.2 : ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜವಬ್ದಾರಿ ಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾರೂ ಕೂಡ ಕಾಲಹರಣದಲ್ಲಿ ತೊಡಗಿಲ್ಲವೆಂದು ಅಂಗನವಾಡಿ ನೌಕರರ ಸಂಘದ ಸಿಐಟಿಯು ಜಿಲ್ಲಾ ಘಟಕ ಮತ್ತು ವೀರಾಜಪೇಟೆ ಘಟಕ ಸ್ಪಷ್ಟಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಕಾವೇರಮ್ಮ ವೀರಾಜಪೇಟೆ ತಾ.ಪಂ ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಕಾರ್ಯವೈಖರಿ ಯನ್ನು ಟೀಕಿಸಿದ್ದು, ಇದು ಅತ್ಯಂತ ಖಂಡನೀಯವೆಂದರು. ಯಾರೋ ಒಬ್ಬರು ನೌಕರರು ಮಾಡುವ ಕರ್ತವ್ಯ ಲೋಪಕ್ಕೆ ಇಡೀ ವೀರಾಜಪೇಟೆ ತಾಲೂಕಿನ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಲಹರಣದ ಆರೋಪ ಹೊರಿಸುತ್ತಿರುವದು ಸರಿಯಾದ ಕ್ರಮವಲ್ಲ. ಕಳೆದ ಅನೇಕ ವರ್ಷಗಳಿಂದ ಅತ್ಯಲ್ಪ ವೇತನವನ್ನು ಪಡೆದುಕೊಂಡು ಅಂಗನವಾಡಿ ಕೇಂದ್ರ ಮಾತ್ರವಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇತರ ಯೋಜನೆಗಳ ಕಾರ್ಯವನ್ನು ಕೂಡ ನಿರ್ವಹಿಸಬೇಕಾಗಿದೆ.
ವೀರಾಜಪೇಟೆ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಕಾರಣದಿಂದಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಲು ಸಾಧ್ಯವಾಗಿದೆ. ಜನಪ್ರತಿನಿಧಿಗಳು ವಿನಾಕಾರಣ ಆರೋಪಗಳನ್ನು ಮಾಡುವದನ್ನು ಬಿಟ್ಟು ಅಂಗನವಾಡಿ ವ್ಯವಸ್ಥೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಮಾಣಿಕವಾಗಿ ಸ್ಪಂದಿಸುವ ಮೂಲಕ ಪರಿಹಾರವನ್ನು ಸೂಚಿಸಬೇಕಾಗಿದೆ. ಅಂಗನವಾಡಿ ಕೇಂದ್ರಕ್ಕೆ ಸರಬರಾಜಾಗುತ್ತಿರುವ ಪೌಷ್ಟಿಕ ಆಹಾರದ ಕೊರತೆ ಮತ್ತು ಗುಣ ಮಟ್ಟದ ಬಗ್ಗೆ ನಿಗಾ ವಹಿಸಬೇಕಾಗಿದೆ. ಈಗಾಗಲೇ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಾಪಾಸ್ಸು ಮಾಡಲಾಗಿದೆ ಎಂದು ತಿಳಿಸಿದ ಕಾವೇರಮ್ಮ ಅಂಗನವಾಡಿ ನೌಕರರ ವಿರುದ್ಧ ಟೀಕೆ ಮತ್ತು ದೌರ್ಜನ್ಯವನ್ನು ಮುಂದುವರೆಸಿದರೆ ಸಂಘದ ವತಿಯಿಂದ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಘಟಕದ ಅಧ್ಯಕ್ಷ ವಿ.ಎಸ್.ಸುಮಿತ್ರ, ಕಾರ್ಯದರ್ಶಿ ಬಿ.ಸಿ.ನಳಿನಾಕ್ಷಿ, ಕ್ಷೇಮನಿಧಿ ಅಧ್ಯಕ್ಷರಾದ ಬಿ.ಕೆ.ಸರೋಜ ಹಾಗೂ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.