ಮಡಿಕೇರಿ, ಸೆ.7: ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಂದು ಕಾಫಿ ಪಾನೀಯದ ಮಹತ್ವದ ಕುರಿತಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ತೀರ್ಮಾನಿಸಿದೆ. ಪಾಲಿಬೆಟ್ಟ ಬಳಿಯ ಹಂಚಿಕಾಡುವಿನ ಕೂರ್ಗ್ ಕ್ಲಿಫ್ ರೆಸಾರ್ಟ್‍ನಲ್ಲಿ ಜರುಗಿದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ 14 ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾಸುಬ್ಬಯ್ಯ ಈ ಬಗ್ಗೆ ಮಾಹಿತಿ ನೀಡಿ, ಅಕ್ಟೋಬರ್ ಒಂದನ್ನು ಈ ಬಾರಿ ಎಲ್ಲೆಡೆ ಅಂತರರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 14 ವರ್ಷಗಳಿಂದ ರಾಜ್ಯವ್ಯಾಪಿ ಕಾಫಿ ಪಾನೀಯದ ಬಗ್ಗೆ ಜನಜಾಗೃತಿ ಮೂಡಿಸಿ ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿರುವ ಮಹಿಳಾ ಕಾಫಿ ಜಾಗೃತಿ ಸಂಘ ಕೂಡ ವಿವಿಧ ಕಾರ್ಯಕ್ರಮ ಆಯೋಜಿಸಲಿದೆ. ಬೈಲುಕುಪ್ಪೆ, ನಿಸರ್ಗಧಾಮ, ಮಡಿಕೇರಿಯ ಪ್ರವಾಸಿ ತಾಣಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಾಫಿಯನ್ನು ಉಚಿತವಾಗಿ ವಿತರಿಸುವ ಮೂಲಕ ಕಾಫಿಯ ಸ್ವಾದ ಮತ್ತು ಮಹತ್ವದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತದೆ ಎಂದರು. ಸಂಘದ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಕಾಫಿ ಕಾಯಿದೆ ಬಗ್ಗೆ ಮತ್ತಷ್ಟು ಚರ್ಚೆ ನಡೆಯಬೇಕಾಗಿದೆ. ಕಾಫಿ ಮಂಡಳಿಗೆ ಅಧಿಕಾರಿ ಬದಲಿಗೆ ಕಾಫಿ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿಸುವ ನಿಯಮ ಸ್ವಾಗತಾರ್ಹವಾಗಿದ್ದರೂ ಕಾಯಿದೆಯಲ್ಲಿ ಸಾಕಷ್ಟು ಲೋಪಗಳು ಕಂಡುಬಂದಿವೆ. ಇಂತಹÀ ಮಹತ್ವದ ಕಾಯಿದೆ ಜಾರಿಗೆ ಮುನ್ನ ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಕಾಫಿ ಬೆಳೆಗಾರರು, ಉದ್ಯಮಿಗಳೊಂದಿಗೆ ಸಾಧಕಬಾಧಕಗಳ ಸಂಬಂಧಿತ ಚರ್ಚೆ ನಡೆಸಬೇಕಾಗಿತ್ತು. ಇದ್ಯಾವದನ್ನೂ ಮಾಡದೇ ಕಾಯಿದೆ ಜಾರಿಗೊಳಿಸಲು ಮುಂದಾಗಿರುವದು ಆಕ್ಷೇಪಗಳಿಗೆ ಕಾರಣವಾಗಿದೆ ಎಂದರು.

ಈ ನಿಟ್ಟಿನಲ್ಲಿ ಕಾಫಿಯ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ 14 ವರ್ಷಗಳಿಂದ ಕಾರ್ಯಪ್ರವೃತ್ತವಾಗಿದ್ದು ಸಂಘದಲ್ಲಿ ಪ್ರಸ್ತುತ 320 ಸದಸ್ಯೆಯರಿದ್ದಾರೆ ಎಂದು ಅನಿತಾ ತಿಳಿಸಿದರು. ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಯೋಜಿಸುವ ಮೂಲಕ ಕರ್ನಾಟಕ ಬೆಳೆಗಾರರ ಸಂಘವೂ ಕಾಫಿಯ ಆಂತರಿಕ ಬಳಕೆಗೆ ಆದ್ಯತೆ ನೀಡಿದೆ ಎಂದು ಅನಿತಾ ಶ್ಲಾಘಿಸಿದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಸಭೆಯಲ್ಲಿ ಕಾಫಿ ಕಾಯಿದೆ ಸಂಬಂಧಿತ ವಿಷಯ ಪ್ರಸ್ತಾಪಿಸಿದ ಸದಸ್ಯೆ ಅಜ್ಜಿಕುಟ್ಟೀರ ಕಮಲ ಪೂಣಚ್ಚ, ಕಾಫಿ ಕಾಯಿದೆ ಬೆಳೆಗಾರರ ಪಾಲಿಗೆ ಮಾರಕವಾಗಿರುವಂತಿದೆ. ಕಾಫಿ ನಾಡಾದ ಕೊಡಗಿನ ಬೆಳೆಗಾರರ ಮೇಲೆ ಹೊಸ ಕಾಯಿದೆ ಮೂಲಕ ಅಧಿಕಾರಿಗಳು ಮತ್ತೊಂದು ಹೊಡೆತ ನೀಡಲು ಸಿದ್ದರಾಗಿದ್ದಾರೆ. ಇಂತಹÀ ಕಾಯಿದೆಗೆ ಕೊಡಗಿನ ಎಲ್ಲರೂ ಆರಂಭಿಕ ಹಂತದಲ್ಲಿಯೇ ವಿರೋಧ ವ್ಯಕ್ತಪಡಿಸುವಂತೆ ಒತ್ತಾಯಿಸಿದರು.

ಸಂಘದ ಸದಸ್ಯೆ ಬುಟ್ಟಿಯಂಡ ಕೃಪಾ ಸೋಮಯ್ಯ ಪ್ರತಿಕ್ರಿಯಿಸಿ, ಕಾಫಿ ಕಾಯಿದೆ ಸಂಬಂಧಿತ ಮತ್ತಷ್ಟು ಸ್ಪಷ್ಟತೆ ಮತ್ತು ಕಾಯಿದೆಗೆ ತಿದ್ದುಪಡಿ ಅಂಶಗಳ ಸಂಬಂಧಿತ ಕಾಫಿ ಬೆಳೆಗಾರರು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರಿಗೆ ಸಹಿ ಅಭಿಯಾನ ಚಳವಳಿಯನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪಾಲೆಕಂಡ ಅನಿತಾ ಅಯ್ಯಣ್ಣ, ಜಂಟಿ ಕಾರ್ಯದರ್ಶಿ ಕಾಯಪಂಡ ಸುಮಾತಿಮ್ಮಯ್ಯ, ಖಜಾಂಜಿ ಭಾವನಾ ಪ್ರವೀಣ್ ಉಪಸ್ಥಿತರಿದ್ದರು. ಚೆಪ್ಪುಡೀರ ಉಮಾ ಪ್ರಾರ್ಥಿಸಿ, ಕುಟ್ಟೇಟಿರ ಕುಮಾರಿ ಕುಂಜ್ಞಪ್ಪ ವಂದಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಸದಸ್ಯೆಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಕಾಫಿಯ ಆಂತರಿಕÉ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಚರ್ಚಿಸಿದರು.