ಮಡಿಕೇರಿ ಜ.4 : ದಿಡ್ಡಳ್ಳಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಪರಿಹಾರೋಪಾಯಗಳನ್ನು ಕಲ್ಪಿಸುವ ವಿಚಾರದಲ್ಲಿ ಐಟಿಡಿಪಿ ಇಲಾಖೆ ತನ್ನ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ, ದಿಡ್ಡಳ್ಳಿಯಲ್ಲಿ ಸ್ಥಳಾಂತರಗೊಂಡಿರುವ ನಿರಾಶ್ರಿತರಿಗೆ ಒಂದು ತಿಂಗಳ ಒಳಗೆ ನಿವೇಶನ ನೀಡುವ ಭರವಸೆಯನ್ನು ನೀಡಲಾಗಿದೆಯಾದರೂ ಈ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆ ಸರ್ವೆ ಕಾರ್ಯಕ್ಕೆಂದು ದಿಡ್ಡಳ್ಳಿಗೆ ತೆರಳಿದ ಸಂದರ್ಭ ಐಟಿಡಿಪಿ ಇಲಾಖೆ ಅಡ್ಡಿ ಪಡಿಸಿದೆ. ನಿರಾಶ್ರಿತರೆಂದು ಹೇಳಿಕೊಂಡು ನೆಲೆ ನಿಂತಿರುವವರ ಸಂಖ್ಯೆಯ ಬಗ್ಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಐಟಿಡಿಪಿ ಇಲಾಖೆÉ ನೀಡಿರುವ ವರದಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ನಿರಾಶ್ರಿತರ ಸಂಖ್ಯೆ ಹೆಚ್ಚಾದಷ್ಟು ತನಗೆ ಲಾಭ ಎನ್ನುವ ರೀತಿಯಲ್ಲಿ ಐಟಿಡಿಪಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಶಾಹಿ ವರ್ಗಕ್ಕೆ ಇಚ್ಛಾಶಕ್ತಿಯ ಕೊರತೆ ಇದ್ದು, ನೈಜ ನಿರಾಶ್ರಿತರಿಗೆ ಜಾಗ ಗುರುತಿಸುವ ಕಾರ್ಯ ವಿಳಂಬವಾಗುತ್ತಿದೆ ಎಂದು ನಂದಾ ಸುಬ್ಬಯ್ಯ ಆರೋಪಿಸಿದರು.
ದಿಡ್ಡಳ್ಳಿಯಲ್ಲಿನ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಬಿಡಬಾರದೆಂದು ಒತ್ತಾಯಿಸಿದ ಅವರು, ಐಟಿಡಿಪಿ ಇಲಾಖೆ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಿ ಸಂಘಟಿತ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವದು. 300ಕ್ಕೂ ಅಧಿಕ ಕುಟುಂಬಗಳಿಗೆ ಒಂದೇ ಭಾಗದಲ್ಲಿ ಆಶ್ರಯ ನೀಡಿದರೆ ಸ್ಥಳೀಯ ಗ್ರಾ.ಪಂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು.
ತೋಟದ ಲೈನ್ ಮನೆಗಳಲ್ಲಿ ವಾಸಿಸುವವರು ತೀವ್ರ ರೀತಿಯ ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವದು ತಪ್ಪು ಅಭಿಪ್ರಾಯವಾಗಿದ್ದು, ಅನೇಕ ಕಡೆ ಲೈನ್ ಮನೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಅವರು ಹೇಳಿದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಅಮ್ಮತ್ತಿ ವ್ಯಾಪ್ತಿಯ ಇಬ್ಬರು ನಿವೃತ್ತ ಸೇನಾಧಿಕಾರಿಗಳ ವಿರುದ್ಧ ಕಂದಾಯ ಇಲಾಖೆ ದೂರು ದಾಖಲಿಸಿರುವ ಕ್ರಮ ಖಂಡನೀಯವೆಂದರು. ತೋಟದ ಮೂಲಕ ಹಾದು ಹೋಗಲು ರಸ್ತೆಯನ್ನು ಬಿಟ್ಟು ಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ದೂರು ನೀಡಲಾಗಿದೆಯೇ ಹೊರತು ಈಗಾಗಲೇ ಸೇನಾಧಿಕಾರಿ ಗಳಿಂದ ಒತ್ತುವರಿ ಯಾಗಿದೆ ಎನ್ನಲಾಗಿರುವ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ನಂದಾ ಸುಬ್ಬಯ್ಯ ಸ್ಪಷ್ಟ ಪಡಿಸಿದರು. ಅಧಿಕಾರಿಗಳು ಈ ಪ್ರಕರಣದಲ್ಲಿ ದೌರ್ಜನ್ಯ ನಡೆಸಿದ್ದು, ನಿವೃತ್ತ ಸೇನಾಧಿಕಾರಿಗಳೆನ್ನುವ ಸೌಜನ್ಯವನ್ನು ಕೂಡ ತೋರಿಲ್ಲ. ಜಿಲ್ಲೆಯ ಕೆಲವು ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಕಿರುಕುಳ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿರುವ ಸುಮಾರು 30 ಸಾವಿರ ಕಾಫಿ ಬೆಳೆಗಾರರು ಕನಿಷ್ಟ ತಲಾ 5 ಎಕರೆ ಭೂಮಿಯನ್ನು ಮಾತ್ರ ಹೊಂದಿದ್ದು, ಇದನ್ನು ಕೂಡ ಹಂಚಿಕೆ ಮಾಡಿ ಎಂದರೆ ಬೆಳೆಗಾರರು ಎಲ್ಲಿಗೆ ಹೋಗಬೇಕು ಎಂದು ನಂದಾ ಸುಬ್ಬಯ್ಯ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಗಣಪತಿ, ಬೆಳೆಗಾರರಾದ ಎ.ಕೆ.ಕುಜ್ಞಪ್ಪ ಹಾಗೂ ಡಿ.ಎಸ್.ಸುಜಯ್ ಉಪಸ್ಥಿತರಿದ್ದರು.