ಮಡಿಕೇರಿ, ಆ. 31: ಭಾರತದ ಮಹಾನ್ ಯೋಧರಲ್ಲಿ ಮಹಾವೀರ ಚಕ್ರ ಪುರಸ್ಕøತ ಸ್ಕ್ವಾಡ್ರನ್ ಲೀಡರ್ ದಿವಂಗತ ಅಜ್ಜಮಾಡ ದೇವಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೆ. 7 ರಂದು ಮಡಿಕೇರಿಯ ಅಜ್ಜಮಾಡ ದೇವಯ್ಯವೃತ್ತದಲ್ಲಿ ನಡೆಸಲಾಗುವದೆಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದ್ದಾರೆ.
ಕೊಡಗಿನಲ್ಲಿ 1932ರ ಡಿಸಂಬರ್ 24 ರಂದು ಜನಿಸಿದ ಸ್ಕ್ವಾಡ್ರನ್ ಲೀಡರ್ ದಿವಂಗತ ಅಜ್ಜಮಾಡ ದೇವಯ್ಯರವರು ಇಂಡಿಯನ್ ಏರ್ ಫೋರ್ಸ್‍ನಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 1965ರ ಸೆಪ್ಟಂಬರ್ 7 ರಂದು ಪಾಕಿಸ್ತಾನದೊಂದಿಗೆ ನಡೆಯುತ್ತಿದ್ದ ಯುದ್ಧದಲ್ಲಿ ಪಾಕಿಸ್ತಾನದ ವಾಯುನೆಲೆಯಲ್ಲಿ ಮೂರು ವಿಮಾನಗಳು ಬಾಂಬ್ ಧಾಳಿ ನಡೆಸಿ ಹಿಂತಿರುಗುವಾಗ ಶತ್ರು ವಿಮಾನಗಳು ಏಕಾಏಕಿ ಧಾಳಿ ನಡೆಸಿದವು. ಈ ಸಂದರ್ಭ ಸ್ಕ್ವಾಡ್ರನ್ ಲೀಡರ್ ದಿವಂಗತ ಅಜ್ಜಮಾಡ ದೇವಯ್ಯ ಅವರು ಚಾಲಿಸುತ್ತಿದ್ದ ವಿಮಾನ ಭಾರತೀಯ ವಿಮಾನಗಳ ರಕ್ಷಣೆಗೆ ಬೆಂಗಾವಲಾಗಿನಿಂತ ಸಂದರ್ಭ ಇವರ ವಿಮಾನಕ್ಕೂ ಗುಂಡುತಗುಲಿ ಬೆಂಕಿ ಹತ್ತಿಕೊಂಡರೂ ಲೆಕ್ಕಿಸದೆ ಕೆಚ್ಚೆದೆಯಿಂದ ಹೋರಾಡಿ ಶತ್ರು ವಿಮಾನವನ್ನು ಹೊಡೆದುರುಳಿಸಿದರು. ದುರದೃಷ್ಟವಶಾತ್ ಇವರ ವಿಮಾನವೂ ಪತನಗೊಂಡು ದೇಶಕ್ಕಾಗಿ ಪ್ರಾಣತೆತ್ತರು. ಅಂತಹ ಕೊಡಗಿನ ಮಹಾನ್ ಧೀಮಂತ ಯೋಧನ ಪುಣ್ಯಸ್ಮರಣೆ ಮಾಡುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ದಿಸೆಯಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಕಾರ್ಯಕ್ರಮವನ್ನು ಈ ವರ್ಷ ಸೆ.7ರಂದು ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರು ಬೆಳಿಗ್ಗೆ 10.30 ರಿಂದ 11 ರವರೆಗೆ ಮಡಿಕೇರಿಯ ಸ್ಕ್ವಾಡ್ರನ್ ಲೀಡರ್ ದಿವಂಗತ ಅಜ್ಜಮಾಡ ದೇವಯ್ಯ ವೃತ್ತದಲ್ಲಿ
(ಮೊದಲ ಪುಟದಿಂದ) ನಂತರ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಮಡಿಕೇರಿಯ ಬಾಲಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಶಾಸಕ ಅಪ್ಪಚ್ಚು ರಂಜನ್, ನಗರಸಭಾ ಆಯುಕ್ತೆ ಬಿ.ಬಿ. ಪುಷ್ಪಾವತಿ, ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿ’ಸೋಜ, ನಿವೃತ್ತ ಸೇನಾಧಿಕಾರಿಗಳು, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಅಜ್ಜಮಾಡ ಕುಟ್ಟಪ್ಪ, ಹಾಗೂ ಅಜ್ಜಮಾಡ ಕುಟುಂಬದ ಅಧ್ಯಕ್ಷರಾದ ಗಣೇಶ್, ಅಜ್ಜಮಾಡ ಕುಟುಂಬದ ಸದಸ್ಯರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್ ದೇವಯ್ಯ, ಆಡಳಿತ ಮಂಡಳಿ ಹಾಗೂ ಸದಸ್ಯರು, ನಗರಸಭಾ ಸದಸ್ಯರು ನಿವೃತ್ತ ಯೋಧರು, ದೇಶಾಭಿಮಾನಿಗಳು, ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಲಿರುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.