ನವದೆಹಲಿ, ಸೆ. 20: ಕಾವೇರಿ ವಿಚಾರದಲ್ಲಿ ಮತ್ತೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಸೋಮವಾರ ನಡೆದ ಕಾವೇರಿ ಮೇಲುಸ್ತುವಾರಿ ಸಮಿತಿ 10 ದಿನಗಳ ಕಾಲ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದರೆ ಮಂಗಳವಾರ ಸುಪ್ರೀಂ ಕೋರ್ಟ್ ಸೆ. 21 ರಿಂದ ಸೆ. 27 ರವೆರೆಗೆ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ. ತಮಿಳುನಾಡು ಕಾವೇರಿ ನೀರಿಗಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಈ ಆದೇಶವನ್ನು ಪ್ರಕಟಿಸಿದೆ. ಈ ಆದೇಶದ ಅನ್ವಯ ಪ್ರತಿದಿನ 6 ಸಾವಿರದಂತೆ ಒಟ್ಟು 42 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ. 4 ವಾರಗಳ ಕಾಲಾವಕಾಶದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚಿಸಿದ ಪೀಠ ಮುಂದಿನ ವಿಚಾರಣೆಯನ್ನು ಸೆ. 28 ಮಧ್ಯಾಹ್ನ 2 ಗಂಟೆಗೆ ಮುಂದೂಡಿತು. ಅಪರೂಪಕ್ಕೊಮ್ಮೆ ಸಾಮಾನ್ಯ ವರ್ಷದಂತೆ ಮಳೆಯಾಗುತ್ತದೆ. ಈ ವರ್ಷವನ್ನು ಜಲ ಸಂಕಷ್ಟದ ವರ್ಷವೆಂದು ಕಾವೇರಿ ಮೇಲುಸ್ತುವಾರಿ ಸಮಿತಿಯೇ ಹೇಳಿದೆ. ನವೆಂಬರ್ ಅಂತ್ಯದಲ್ಲಿಯೇ ರಾಜ್ಯದಲ್ಲಿ ನೀರಿಗೆ ಬರ ಶುರುವಾಗಲಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್ ಪ್ರಬಲವಾಗಿ ವಾದ ಮಂಡಿಸಿದ್ದರು. ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದ್ದ ಆದೇಶದ ಪ್ರತಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ಕೈಸೇರದೇ ಇದ್ದ ಕಾರಣ ವಿಚಾರಣೆ ಮಧ್ಯಾಹ್ನದಿಂದ ಆರಂಭಗೊಂಡಿತ್ತು. ಜಲಸಂಪನ್ಮೂಲ ಖಾತೆ ಸಚಿವ ಎಂಬಿ ಪಾಟೀಲ್, ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಕೋರ್ಟ್ ಹಾಲ್‍ನಲ್ಲಿ ಉಪಸ್ಥಿತರಿದ್ದರು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಕೃಷಿ, ನೀರಾವರಿ ತಜ್ಞರು ಸೇರಿದಂತೆ ಅಧ್ಯಕ್ಷ, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ. ಕಾವೇರಿ ಕೊಳ್ಳದ ಎಲ್ಲ ಜಲಾಶಯಗಳು ಈ ನಿರ್ವಹಣಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಒಂದು ವೇಳೆ ಈ ನಿರ್ವಹಣಾ ಮಂಡಳಿ ರಚನೆಯಾದರೆ ತಮಿಳುನಾಡಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತ್ತಿದೆ.

ನ್ಯಾಯಾಲಯದ ಆದೇಶದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೀರ್ಪಿನ ಕುರಿತಾಗಿ ಬುಧವಾರ ಸಚಿವ ಸಂಪುಟ ಸಭೆ ಹಾಗೂ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿರುವದಾಗಿ ಪ್ರಕಟಿಸಿದ್ದಾರೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿದಿರುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ನೀರು ಬಿಡಲು ಅಸಾಧ್ಯ ಎನ್ನುವ ಕುರಿತು ಸರಕಾರ ಪರ ವಕೀಲರು ಕರ್ನಾಟಕದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿದ್ದರೂ ತೀರ್ಪು ವ್ಯತಿರಿಕ್ತವಾಗಿ ಹೊರಬಿದ್ದಿದೆ ಎಂದು ಮುಖ್ಯಮಂತ್ರಿ ವಿಷಾದಿಸಿದರು. ಜನತೆ ಉದ್ವೇಗಕ್ಕೊಳಗಾಗದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.