ಮಡಿಕೇರಿ, ಜ. 2: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೂ. 500 ಹಾಗೂ 1000 ರೂ. ನೋಟುಗಳನ್ನು ಅಪನಗದೀಕರಣ ಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರಕೈಗೊಂಡ ಬಳಿಕ ಕೊಡಗು ಜಿಲ್ಲೆಯಲ್ಲಿ ನಿನ್ನೆಯವರೆಗೆ 1,426 ಕೋಟಿಯಷ್ಟು 500-1000 ರೂ. ನೋಟುಗಳು ಬ್ಯಾಂಕ್‍ಗೆ ಜಮೆಯಾಗಿದೆ. ನೋಟು ರದ್ದಾದ ಬಳಿಕ ಜಿಲ್ಲೆಗೆ 400 ಕೋಟಿಯಷ್ಟು 2000 ರೂ. ನೋಟುಗಳು ಬಂದಿದ್ದು, ವಹಿವಾಟಿನಲ್ಲಿದೆ. ರೂ. 4 ಕೋಟಿಯಷ್ಟು 500 ರೂ.ನ ಹೊಸ ನೋಟುಗಳು ಬಂದಿದ್ದು, ಕಡಿಮೆ ಪ್ರಮಾಣದಲ್ಲಿದೆ. ನೋಟು ರದ್ದು ಬಳಿಕ ಆರಂಭದಲ್ಲಿ ಬಂದ 2000 ಹಾಗೂ ನಂತರ ಬಂದ 500 ರೂ.ನ ಹೊಸ ನೋಟುಗಳು ಹಾಗೂ ಈ ಹಿಂದೆ ಇದ್ದ 100, 50, 20 ಹಾಗೂ 10 ರೂ.ನ ನೋಟುಗಳು ಸೇರಿದಂತೆ 650 ಕೋಟಿಯಷ್ಟು ಹಣ ವಹಿವಾಟಿಗಾಗಿ ಕೊಡಗಿನ ಬ್ಯಾಂಕ್‍ಗಳಿಗೆ ಆರ್‍ಬಿಐನಿಂದ ಬಂದಿದೆ.

ನೋಟು ರದ್ದಾದ ಬಳಿಕ 500 ರೂ.ನ ಹೊಸ ನೋಟುಗಳು ಸಾಕಷ್ಟು ಲಭ್ಯವಿಲ್ಲ. ಇದರಿಂದ ಕೊಡಗಿನಲ್ಲಿ ಕಾಫಿ ಬೆಳೆಗಾರರಿಗೆ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, 100 ಹಾಗೂ 500 ರೂ. ನೋಟುಗಳನ್ನು ಶೀಘ್ರವಾಗಿ ಕೊಡಗಿಗೆ ಒದಗಿಸುವಂತೆ ರಿಸರ್ವ್ ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 1,21,000 ಜನಧನ್ ಖಾತೆಗಳಿವೆ. 500, 1000 ನೋಟು ರದ್ದಾದ ಬಳಿಕ ಜನಧನ್ ಖಾತೆ ದುರ್ಬಳಕೆ ಆಗಲಿದೆ. ಜಾಗೃತವಾಗಿರಿ ಎಂದು ಪ್ರಧಾನಿ ಮೋದಿಯವರು ಮನವಿ ಮಾಡಿದ್ದರು. ಅವರ ಊಹೆಯಂತೆ ಹಲವೆಡೆ ಜನ್‍ಧನ್ ಖಾತೆ ದುರ್ಬಳಕೆ ಯಾಗಿರುವದು ಪತ್ತೆಯಾಗಿದ್ದು, ಅದೇ ರೀತಿ ಕೊಡಗಿನಲ್ಲಿಯೂ ಕೂಡ ಜನ್‍ಧನ್ ಖಾತೆ ದುರ್ಬಳಕೆ ಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಕೇವಲ 2 ರೂಪಾಯಿ ಹಣವಿದ್ದ ಜನ್‍ಧನ್ ಖಾತೆಯೊಂದರಲ್ಲಿ ಇದ್ದಕ್ಕಿದ್ದಂತೆ (ಮೊದಲ ಪುಟದಿಂದ) 48,000 ರೂ. ಚಲಾವಣೆಯಾಗಿರುವದೂ ಬ್ಯಾಂಕ್ ಅಧಿಕಾರಿಗಳ ಪರಿಶೀಲನೆ ವೇಳೆ ಬಯಲಿಗೆ ಬಂದಿದೆ. ಈ ರೀತಿಯ ಹಲವಾರು ಪ್ರಕರಣಗಳು ಪತ್ತೆಯಾಗಿದ್ದು, ವಹಿವಾಟು ನಡೆಸಿದವರ ಮುಖವನ್ನು ಪತ್ತೆ ಹಚ್ಚುವಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಕಾರ್ಯೋನ್ಮುಖ ರಾಗಿರುವದಾಗಿ ತಿಳಿದು ಬಂದಿದೆ.

ಬ್ಯಾಂಕ್ ಮಿತ್ರರು

ಗ್ರಾಮೀಣ ಭಾಗಗಳಲ್ಲಿ ಎ.ಟಿ.ಎಂ. ವ್ಯವಸ್ಥೆಯಿಲ್ಲದ ಕಾರಣ ಗ್ರಾಮೀಣ ಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಹಣ ಒದಗಿಸುವ ಸಲುವಾಗಿ ಬ್ಯಾಂಕ್ ಮಿತ್ರರನ್ನು ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. 92 ಮಂದಿಯನ್ನು ಇದಕ್ಕಾಗಿ ನೇಮಿಸ ಲಾಗಿದೆ. ಇವರುಗಳ ಬಳಿ ಸುಮಾರು 50,000 ರೂ.ಗಳಷ್ಟು ಹಣವಿರುತ್ತದೆ. ಹಣದ ಅವಶ್ಯಕತೆಯಿರುವ ಮಂದಿ ಇವರನ್ನು ಸಂಪರ್ಕಿಸಿ ತಮ್ಮ ಖಾತೆಯ ನಿಖರ ಮಾಹಿತಿ ನೀಡಿ ಹಣವನ್ನು ಪಡೆಯಬಹುದಲ್ಲದೆ ಹಣ ಜಮಾವಣೆಯನ್ನೂ ಮಾಡಬಹು ದಾಗಿದೆ ಎಂದು ದೇವಯ್ಯ ಮಾಹಿತಿಯಿತ್ತರು.

ಕೊಡಗಿನಲ್ಲಿ 2,500 ಜನ ಸಂಖ್ಯೆಗೆ ಒಂದರಂತೆ ಬ್ಯಾಂಕ್‍ಗಳಿವೆ. ಇದರಿಂದಾಗಿ ನೋಟು ರದ್ದು ಗೊಳಿಸಿದ ಪ್ರಧಾನಿಯವರ ನಿರ್ಧಾರ ಕೊಡಗಿನಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಉತ್ತರ ಭಾರತ ಸೇರಿದಂತೆ ಹಲವೆಡೆ 2.50 ಲಕ್ಷ ಜನಸಂಖ್ಯೆಗೆ ಕೇವಲ ಒಂದು ಬ್ಯಾಂಕ್‍ಗಳಿದ್ದು, ಈ ಹಿನ್ನೆಲೆಯಲ್ಲಿ ನೋಟು ರದ್ದಾದ ಬಳಿಕ ಆ ಭಾಗಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಕೊಡಗಿನಲ್ಲಿ 176 ಬ್ಯಾಂಕ್ ಶಾಖೆಗಳು, 68 ವಿಎಸ್‍ಎಸ್‍ಎನ್‍ಗಳಲ್ಲಿ ಬ್ಯಾಂಕ್ ವಹಿವಾಟು ನಡೆಯುತ್ತಿದೆ ಎಂದು ದೇವಯ್ಯ ಹೇಳಿದರು.