ಮಡಿಕೇರಿ, ಜ. 19: ಸರ್ಕಾರದ ಜನಪರ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ಕ್ಯಾಲೆಂಡರನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಬಿಡುಗಡೆ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ‘ಜನ ಕಲ್ಯಾಣಕ್ಕಾಗಿ ನಮ್ಮ ಜನಪರ ಯೋಜನೆಗಳು’ ಎಂಬ ಶೀರ್ಷಿಕೆಯಡಿ 2017ರ ಕ್ಯಾಲೆಂಡರನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅವರು ಬಿಡುಗಡೆ ಮಾಡಿದರು.

ಸರ್ಕಾರ ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ, ಆರೋಗ್ಯವಂತ ಮಕ್ಕಳಿಗಾಗಿ ಕ್ಷೀರಭಾಗ್ಯ, ರೈತ ಸಮುದಾಯದ ಏಳಿಗೆಗಾಗಿ ಕೃಷಿಭಾಗ್ಯ, ಗ್ರಾಮೀಣ ಪ್ರದೇಶದಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸುವ ನಿಟ್ಟಿನಲ್ಲಿ ನಿರ್ಮಲಭಾಗ್ಯ, ಬಡ ಜನರ ಉತ್ತಮ ಆರೋಗ್ಯಕ್ಕಾಗಿ ರಾಜೀವ್ ಆರೋಗ್ಯ ಭಾಗ್ಯ, ಹೈನುಗಾರಿಕೆ ಉತ್ತೇಜನಕ್ಕೆ ಕ್ಷೀರಧಾರೆ, ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಊಟ, ವಸತಿಗಾಗಿ ವಾರ್ಷಿಕ 15 ಸಾವಿರ ರೂ. ಆರ್ಥಿಕ ನೆರವಿಗಾಗಿ ವಿದ್ಯಾಸಿರಿ, ಆರೋಗ್ಯಕರ ಜೀವಜಲಕ್ಕಾಗಿ ಶುದ್ಧ ಕುಡಿಯುವ ನೀರು, ಹೊಸ ಬದುಕಿನ ಆಶಯಕ್ಕೆ ಮುನ್ನುಡಿಯಾಗಿ ಋಣ ಮುಕ್ತ (ಸಾಲ ಮನ್ನಾ), ಲಿಂಗ ಅಲ್ಪಸಂಖ್ಯಾತರಿಗಾಗಿ ಮೈತ್ರಿ, 40 ವರ್ಷ ದಾಟಿದ ಮದುವೆಯಾಗದಿರುವ ಮಹಿಳೆಯರಿಗೆ ಮನಸ್ವಿನಿ ಹೀಗೆ ನಾನಾ ಮಾಹಿತಿ ಯನ್ನು ಒಳಗೊಂಡ ಕ್ಯಾಲೆಂಡರ್ ಹೊರ ತಂದಿರುವುದು ವಿಶೇಷವಾಗಿದೆ. ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ, ವಾರ್ತಾಧಿಕಾರಿ ಚಿನ್ನಸ್ವಾಮಿ ಇದ್ದರು.