ಕುಶಾಲನಗರ, ಜ. 17: 2006 ರ ಭರವಸೆಯನ್ನು ಪರಿಶೀಲನೆ ಮಾಡಲು 2017 ರಲ್ಲಿ ಕರ್ನಾಟಕ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ ಒಟ್ಟು 15 ವಿಧಾನಸಭಾ ಸದಸ್ಯರು ಜಿಲ್ಲೆಗೆ ಭೇಟಿ ನೀಡಿರುವದು ಗಮನಾರ್ಹ ಅಂಶವಾಗಿದೆ. ಜಿಲ್ಲೆಯ ದುಬಾರೆ ಜಂಗಲ್ ಲಾಡ್ಜ್ ಸಭಾಂಗಣದಲ್ಲಿ ವಿಧಾನಸಭಾ ಸದಸ್ಯರೂ ಹಾಗೂ ಸಮಿತಿಯ ಅಧ್ಯಕ್ಷ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಭೆ ಸೇರಿದ ವಿಧಾನಸಭಾ ಸದಸ್ಯರು, ಸರಕಾರಿ ಭರವಸೆ ಸಮಿತಿಯ ಅಧಿಕಾರಿಗಳು, ಅಭಿಲೇಖನ ಅಧಿಕಾರಿಗಳು ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಶೀತಪೀಡಿತ ಗ್ರಾಮಗಳ ವಾಸ್ತವಾಂಶದ ಬಗ್ಗೆ ಚರ್ಚೆ ನಡೆಯಿತು.

2006 ರಲ್ಲಿ ವಿಧಾನಸಭಾ ಸದಸ್ಯರಾಗಿದ್ದ ಬಿ.ಎ.ಜೀವಿಜಯ ಅವರ ಚುಕ್ಕೆ ಗುರುತಿನ ಪ್ರಶ್ನೆಯ ಭರವಸೆ ಸಂಖ್ಯೆ 141/12/2006 ಕ್ಕೆ ಸಂಬಂಧಿಸಿದಂತೆ ಹಾರಂಗಿ ಮತ್ತು ಹೇಮಾವತಿ ಜಲಾಶಯ ಅಣೆಕಟ್ಟೆ ನಿರ್ಮಾಣದಿಂದ ಮತ್ತು ಹಿನ್ನೀರಿನಿಂದ ಸೋಮವಾರಪೇಟೆಯ ಸುತ್ತಮುತ್ತಲ ಗ್ರಾಮಗಳಾದ ಜನಾರ್ದನ ಹಳ್ಳಿ, ಮಾವಿನಹಳ್ಳಿ, ಮಾಗಡಿಹಳ್ಳಿ, ಹಿಪ್ಪಗಳಲೆ, ಹೊನ್ನೆಕೋಡಿ ವ್ಯಾಪ್ತಿಯಲ್ಲಿ ಶೀತ ಪೀಡಿತವಾಗಿ ಸದರಿ ಹಳ್ಳಿಗಳಲ್ಲಿನ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲದ್ದರ ಬಗ್ಗೆ ಪರಿಶೀಲನೆಗೆ ಈ ಭರವಸೆ ಸಮಿತಿ ತಂಡ ಭೇಟಿ ನೀಡಿದೆ.